ಬೆಂಗಳೂರು : ಶೀಘ್ರದಲ್ಲೇ ಬಸ್ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಲಭ್ಯ

ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ:

ಸ್ಮಾರ್ಟ್ ಕಾರ್ಡ್ ಜಾರಿಯಾದ ಬಳಿಕ, ಪ್ರಯಾಣದ ವೇಳೆ ಬಸ್ ನಿರ್ವಾಹಕರಿಗೆ ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಗುರುತಿನ ಕಾರ್ಡ್ ಗಳನ್ನು ತೋರಿಸುವ ಅಗತ್ಯವಿರುವುದಿಲ್ಲ. ರಾಜ್ಯದ ಮೂರು ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು.

ಪುರುಷ ಪ್ರಯಾಣಿಕರು ಮೆಟ್ರೋ ಕಾರ್ಡ್ ಮಾದರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದು. ಇದರಲ್ಲಿ ಮರು ರಿಚಾರ್ಜ್ ಸೌಲಭ್ಯವೂ ಇರಲಿದೆ.

ಸಾರಿಗೆ ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ರಯಾಣಿಕರ ಗೊಂದಲಗಳನ್ನು ನಿವಾರಿಸಿ ಸೇವೆಯನ್ನು ಸರಳೀಕರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇರಾನ್ ನಲ್ಲಿರುವ ಭಾರತೀಯರಿಗೆ ದೇಶ ಬಿಟ್ಟು ಹೊರಡುವಂತೆ ಭಾರತ ಆದೇಶ

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಮಿಲಿಟರಿ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದರೂ, ಪರಸ್ಪರರ ಇಂಧನ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

  • ದೇಶ ತೊರೆಯುವಂತೆ ಸೂಚನೆ: ಪ್ರಸ್ತುತ ಇರಾನ್‌ನಲ್ಲಿ ಉದ್ಯೋಗ, ಶಿಕ್ಷಣ ಅಥವಾ ಪ್ರವಾಸದ ನಿಮಿತ್ತ ನೆಲೆಸಿರುವ ಎಲ್ಲಾ ಭಾರತೀಯರು, ಸಾಧ್ಯವಾದಷ್ಟು ಬೇಗ ದೇಶವನ್ನು ತೊರೆದು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ.
  • ವಿಮಾನ ಯಾನ ಸ್ಥಗಿತದ ಭೀತಿ: ಇರಾನ್ ತನ್ನ ವಾಯುಪ್ರದೇಶವನ್ನು ಯಾವುದೇ ಕ್ಷಣದಲ್ಲಿ ಬಂದ್ ಮಾಡುವ ಸಾಧ್ಯತೆ ಇರುವುದರಿಂದ, ವಿಮಾನ ಸಂಚಾರ ನಿಲ್ಲುವ ಮುನ್ನವೇ ನಿರ್ಗಮಿಸುವುದು ಸೂಕ್ತವಾಗಿದೆ.
  • ರಾಯಭಾರ ಕಚೇರಿಯಲ್ಲಿ ನೋಂದಣಿ: ತಕ್ಷಣಕ್ಕೆ ಮರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವವರು, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಮ್ಮ ವಿವರಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
  • ಭದ್ರತಾ ಕ್ರಮಗಳು: ಇರಾನ್‌ನಲ್ಲಿರುವ ಭಾರತೀಯರು ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಜನನಿಬಿಡ ಪ್ರದೇಶಗಳನ್ನು ತಪ್ಪಿಸಿ, ಸುರಕ್ಷಿತ ಕಟ್ಟಡಗಳು ಅಥವಾ ಆಶ್ರಯ ತಾಣಗಳಲ್ಲಿ ಉಳಿಯುವಂತೆ ಸಲಹೆ ನೀಡಲಾಗಿದೆ.

ತುರ್ತು ಸಂಪರ್ಕ:

ಭಾರತೀಯ ರಾಯಭಾರ ಕಚೇರಿಯು 24/7 ತುರ್ತು ಸಹಾಯವಾಣಿಯನ್ನು ಕಾರ್ಯರೂಪಕ್ಕೆ ತಂದಿದೆ. ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ತಕ್ಷಣವೇ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಆಪರೇಷನ್ ಶೆರಾವಲಿ ವೇಳೆ ನಡೆದ ದುರಂತ – ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಡಿದಾದ ಪರ್ವತದ ತುದಿಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದು ಸೇನಾಧಿಕಾರಿ ಬೀರೇಶ್ವರ್ ಗೊಸ್ವಾಮಿ ಅವರು ಮೃತಪಟ್ಟಿದ್ದಾರೆ.

ರಾಜೌರಿ ದುರ್ಗಮ ಕಾಡುಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಅಡಗಿದ್ದರು. ಅವರನ್ನು ಪತ್ತೆಹಚ್ಚಲು ಕಳೆದ 15 ದಿನಗಳಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಜಂಟಿ ಕಾರ್ಯಾಚರಣೆ ವೇಳೆ ಈ ದುರಂತ ಸಂಭವಿಸಿದೆ.

ಜಮ್ಮು ಕಾಶ್ಮೀರ ಪೊಲೀಸ್‌ ಮತ್ತು ಅರೆಸೈನಿಕ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಮುನ್ನಡೆಸುತ್ತಿದ್ದು, ಶನಿವಾರ ಸಂಜೆ ಡೋರಿಮಲ್‌ ಪ್ರದೇಶದ ಕಡಿದಾದ ಬಂಡೆಗಳು ಹಾಗೂ ದುರ್ಗಮ ಪರ್ವತಗಳ ನಡುವೆ ಕಾರ್ಯಾಚರಣೆಯಲ್ಲಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಅಪಾಯಕಾರಿ ಭೌಗೋಳಿಕ ಪರಿಸ್ಥಿತಿಯಿಂದಾಗಿ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಕಾಲು ಜಾರಿ ಕಮರಿಗೆ ಬಿದ್ದರು.

ತಕ್ಷಣ ಜೊತೆಯಲ್ಲಿದ್ದವರು ರಕ್ಷಣಾ ಕಾರ್ಯಾಚರಣೆ ನಡೆಸಿ, ಅವರನ್ನು ಹೊರತೆಗೆದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ್ವರ್ ಗೋಸ್ವಾಮಿ ಸಾವನ್ನಪ್ಪಿದ್ದಾರೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ 

ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ ರೂ. 29 ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಬೆಲೆ ಏರಿಕೆಯ ನಡುವೆಯೇ ದೇಶದ ಜನಸಾಮಾನ್ಯರಿಗೆ ಮತ್ತೊಂದು ಆಘಾತವಾಗಿದೆ.

ಹೊಸ ಪರಿಷ್ಕೃತ ದರದಂತೆ, ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ. 913ರಿಂದ ರೂ. 942ಕ್ಕೆ ಏರಿಕೆಯಾಗಿದೆ. ಪರಿಷ್ಕೃತ ದರಗಳು ಜೂನ್ 7ರಿಂದಲೇ ಜಾರಿಗೆ ಬಂದಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ದರ ಏರಿಕೆಗೆ ಕಾರಣ : ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಸಂಘರ್ಷ ಮತ್ತು ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ಅನಿಲ ಪೂರೈಕೆಯ ಮೇಲಿನ ಒತ್ತಡದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆ ಕಂಡಿವೆ. ಇದರ ಪರಿಣಾಮ ದೇಶೀಯ ಎಲ್‌ಪಿಜಿ ದರಗಳ ಮೇಲೂ ಬಿದ್ದಿದೆ.ಈ ಮೊದಲು ಮಾರ್ಚ್ 7ರಂದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ರೂ. 60 ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ರೂ. 29 ಏರಿಕೆಯಾಗಿರುವುದರಿಂದ ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.

ಸರ್ಕಾರ ಕೈಗೊಂಡಿರುವ ಕ್ರಮಗಳೇನು?: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಮಾತನಾಡಿ, ದೇಶದಲ್ಲಿ ಎಲ್‌ಪಿಜಿ ಲಭ್ಯತೆಯನ್ನು ಸಮರ್ಪಕವಾಗಿ ಕಾಯ್ದುಕೊಳ್ಳಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ದೇಶೀಯ ಉತ್ಪಾದನೆ ಹೆಚ್ಚಿಸುವುದು, ಅಗತ್ಯ ಪ್ರಮಾಣದ ಆಮದು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಪೂರೈಕೆ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಎಲ್‌ಪಿಜಿ ದರ ಏರಿಕೆ ದೇಶಾದ್ಯಂತ ಅನ್ವಯವಾಗಲಿದ್ದರೂ, ಸ್ಥಳೀಯ ತೆರಿಗೆಗಳು ಮತ್ತು ಸಾರಿಗೆ ವೆಚ್ಚಗಳ ವ್ಯತ್ಯಾಸದಿಂದ ವಿವಿಧ ನಗರಗಳಲ್ಲಿ ಬೆಲೆಯಲ್ಲಿ ಬದಲಾವಣೆ ಕಂಡುಬರಲಿದೆ.

ಲಾಟರಿ ಖರೀದಿಸಿದ ಕೇರಳದ ವ್ಯಕ್ತಿಗೆ ವಂಚನೆ. – ಪ್ರಕರಣ ದಾಖಲು

ಕೇರಳ ಲಾಟರಿ ಬಹುಮಾನದ ಆಮಿಷವೊಡ್ಡಿ 1.85 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. 12 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಎಂದು ನಂಬಿಸಿ ಈ ವಂಚನೆ ನಡೆಸಲಾಗಿದೆ.

ಮೇ 29 ರಂದು ಫೇಸ್‌ಬುಕ್‌ನಲ್ಲಿ ಲಾಟರಿ ಜಾಹೀರಾತು ನೋಡಿ, ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದ ಸಂತ್ರಸ್ತರಿಗೆ ನವೀನ್ ಎಂಬಾತ ಲಾಟರಿ ನಂಬರ್ ಕಳುಹಿಸಿದ್ದನು. ಕೇವಲ 100 ರೂ. ಹೂಡಿಕೆ ಮಾಡಿ 12 ಲಕ್ಷ ರೂ. ಬಹುಮಾನ ಗೆದ್ದಿರುವುದಾಗಿ ನಂಬಿಸಿದ ವಂಚಕರು, ನಂತರದ ಹಂತಗಳಲ್ಲಿ ದೀಪಕ್ ಮತ್ತು ರಾಜ್‌ಕುಮಾರ್ ಹೆಸರಿನ ಗೂಗಲ್ ಪೇ ಖಾತೆಗಳಿಗೆ ತೆರಿಗೆ ಮತ್ತು ಇತರೆ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಳ್ಳುತ್ತಾ ಬಂದರು.

​ಸಂದೇಹ ಬಂದು ಕಚೇರಿಯ ವಿಳಾಸ ಕೇಳಿದಾಗ ನಕಲಿ ಮ್ಯಾಪ್ ಕಳುಹಿಸಿ ನಂಬಿಸಿದ್ದ ವಂಚಕರು, ಕೊನೆಗೆ ಜೂನ್ 2 ರಂದು ಸಂತ್ರಸ್ತರು ಖುದ್ದಾಗಿ ತಿರುವನಂತಪುರದ ಲಾಟರಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಅದು ಸಂಪೂರ್ಣ ಸುಳ್ಳು ಮತ್ತು ಫೇಕ್ ಲಾಟರಿ ಎಂಬುದು ತಿಳಿದುಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭೂಕಂಪ

ಶಿಮ್ಲಾ, ಜೂ 6 : ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ತೀವ್ರ ಭೂಕಂಪ ಸಂಭವಿಸಿದ್ದು, ಕಾಂಗ್ರಾ, ಚಂಬ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದರಿಂದಾಗಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದ ಘಟನೆಗಳು ವರದಿಯಾಗಿವೆ.

ಭೂಕಂಪದ ಆಳ ಕೇವಲ ಐದು ಕಿಲೋಮೀಟರ್ ಇರುವುದರಿಂದ ಹಲವು ಪ್ರದೇಶಗಳಲ್ಲಿ ಭೂಕಂಪನವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ರಾತ್ರಿ 10.4ರ ಸುಮಾರಿಗೆ ಕಾಂಗ್ರಾ ಚಂಬಾ ಗಡಿ ಯಲ್ಲಿ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ಧರ್ಮಶಾಲಾದಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿದೆ. ಸದ್ಯದ ವರದಿಗಳ ಪ್ರಕಾರ ಯಾವುದೇ ಜೀವ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಮಾಹಿತಿ ಲಭ್ಯವಾಗಿಲ್ಲ.

ಹಿಮಾಚಲ ಪ್ರದೇಶ ಮಾತ್ರವಲ್ಲದೆ ಚಂಡಿಗಡ ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ಈ ಭೂಕಂಪನದ ವಲಯವು ಅತ್ಯಂತ ಅಪಾಯಕಾರಿಯಾಗಿದ್ದು, ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳು ಭೂಕಂಪನ ವಲಯ 5 ರ ವ್ಯಾಪ್ತಿಗೆ ಸೇರಿವೆ.

ಭೂಕಂಪದದ ನಂತರ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ

ಕೆ. ಸುರೇಂದ್ರನ್ ಅವರ ಪರಿಶ್ರಮದ ಫಲ!!!

ಕೆ. ಸುರೇಂದ್ರನ್ ಅವರ ಪರಿಶ್ರಮದ ಫಲವಾಗಿ ಕಾಸರಗೋಡು ಸಂಸದರು ಮತ್ತು ಮಂಜೇಶ್ವರ ಶಾಸಕರು ದೀರ್ಘಕಾಲದಿಂದ ತಿರಸ್ಕರಿಸಿದ ಎನ್ಮಕಜೆ ಗ್ರಾಮ ಪಂಚಾಯತ್ ನ ವಾರ್ಡ್ 18 ನಾಲ್ಕ ವ್ಯಾಪ್ತಿಯ ಪಾಪಿತಡ್ಕ – ನೀರಾಮೂಳೆ – ಗುರಿನೆರೋಲು ರಸ್ತೆ ( THARING + CONCRETING ) ನಿರ್ಮಾಣಕ್ಕೆ Rs.30 ಲಕ್ಷ ಮಂಜೂರು ಮಾಡಿರುವ ಡಾ. ಪಿ.ಟಿ ಉಷಾ ಎಂಪಿ ಅವರಿಗೆ ಧನ್ಯವಾದಗಳು.