ಕಳೆದುಕೊಂಡ ಬ್ರೇಸ್ಲೆಟ್ ಪತ್ತೆ : 1 ಲಕ್ಷ ರೂ. ಬಹುಮಾನ ಪಡೆದುಕೊಂಡ ಯುವತಿ

ಫೋಟೋ ಕೃಪೆ : Suddi news

ಸುಳ್ಯದ ಗಾಂಧಿನಗರದಲ್ಲಿ ಕಳೆದುಹೋಗಿದ್ದ 6 ಪವನ್ ತೂಕದ ಚಿನ್ನದ ಬ್ರೇಸ್‌ಲೆಟ್ ಕಳೆದುಕೊಂಡವರು ಅದನ್ನು ಮರಳಿ ಪಡೆದಿದ್ದಾರೆ. ಅದನ್ನು ಕಂಡುಕೊಂಡ ಕೇರಳ ಮೂಲದ ಯುವತಿ, ಪ್ರಾಮಾಣಿಕವಾಗಿ ಮಾಲೀಕರಾದ ಭೋಜಪ್ಪ ಅಜಿಲ ಅವರಿಗೆ ಹಿಂದಿರುಗಿಸಿದ್ದಾರೆ.

ಅದು ಸಿಕ್ಕಿದವರಿಗೆ ಭೋಜಪ್ಪ ಅಜಿಲರು 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಅವರು ಜೂನ್ 21 ರಂದು ಸುಳ್ಯದ ಗಾಂಧೀನಗರದಲ್ಲಿ ತಮ್ಮ ಬ್ರೇಸ್ ಲೇಟ್ ನ್ನು ಕಳೆದುಕೊಂಡಿದ್ದಾಗಿ ಅಂದುಕೊಂಡಿದ್ದರು. ಆದರೆ ಜಾಲ್ಸುರಿನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಕಾರು ಹತ್ತುವ ಸಂದರ್ಭದಲ್ಲಿ ಕಳಚಿ ಬಿದ್ದಿತ್ತು.

ಅದು ಕೇರಳದ ಚಟ್ಟಂಚಾಲಿನ ಯುವತಿಗೆ ಸಿಕ್ಕಿದ್ದು, ಹಿಂದಿರುಗಿಸಿದ್ದಾರೆ. ಮೊದಲೇ ಹೇಳಿದಂತೆ ಭೋಜಪ್ವರು, ಯುವತಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು ಚಿನ್ನದ ಉಂಗುರವನ್ನು ಬಹುಮಾನ ರೂಪದಲ್ಲಿ ನೀಡಿ ಧನ್ಯವಾದ ತಿಳಿಸಿದ್ದಾರೆ.

​ಮಂಜನಾಡಿ ಗುಡ್ಡ ಕುಸಿತದ ಸಂತ್ರಸ್ತೆ ಶ್ರೀಮತಿ ಅಶ್ವಿನಿ ಮನೆಗೆ ಶಾಸಕ ಕಿಶೋರ್ ಕುಮಾರ್ ಭೇಟಿ: ಬದುಕಿಗೆ ಭರವಸೆಯ ಆಸರೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ದ ಪ್ರಯುಕ್ತ
ಮಂಗಳೂರು ಮಂಡಲದ ವಿಶೇಷ ಪ್ರವಾಸದಲ್ಲಿ ಇದ್ದ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರುರವರು ಕಳೆದ ವರ್ಷ ಮಂಗಳೂರು ಉಳ್ಳಾಲ ಸಮೀಪದ ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ತನ್ನ ಇಡೀ ಪ್ರಪಂಚವನ್ನೇ ಕಳೆದುಕೊಂಡು, ಅತೀವ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ನೊಂದ ಮಹಿಳೆ ಶ್ರೀಮತಿ ಅಶ್ವಿನಿ ಅವರು ಮನೆಗೆ ಇಂದು ಖುದ್ದಾಗಿ ಭೇಟಿ ನೀಡಿ ಸಾಂತ್ವನ ಹೇಳಿದರು. ಕರುಳು ಹಿಂಡುವ ಈ ದುರಂತದ ಬಳಿಕ ಚಿಂತಾ ಜನಕ ಪರಿಸ್ಥಿತಿಯಲ್ಲಿರುವ ಕುಟುಂಬಕ್ಕೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಬೆಂಬಲವಾಗಿ ನಿಲ್ಲುವ ಭರವಸೆಯನ್ನು ಶಾಸಕರು ತುಂಬಿದರು.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತವು ಅಶ್ವಿನಿ ಅವರ ಬದುಕನ್ನೇ ನುಚ್ಚುನೂರು ಮಾಡಿತು. ಈ ಭೀಕರ ದುರಂತದಲ್ಲಿ ಅಶ್ವಿನಿ ಅವರು ತಮ್ಮಿಬ್ಬರು ಮುದ್ದಾದ ಮಕ್ಕಳು ಹಾಗೂ ಅತ್ತೆಯನ್ನು ಕಳೆದುಕೊಂಡಿದ್ದರು. ಕೇವಲ ಪ್ರಾಣ ಹಾನಿಯಷ್ಟೇ ಅಲ್ಲದೆ, ಪ್ರಕೃತಿಯ ವಿಕೋಪಕ್ಕೆ ಅಶ್ವಿನಿಯವರು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡರೆ ಅವರ ಮಾಬ ಒಂದು ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವಿಕಲಕ್ಕೆ ತುತ್ತಾಗಿದ್ದಾರೆ. ಕಣ್ಣ ಮುಂದೆಯೇ ಇಡೀ ಕುಟುಂಬ ಹಾಗೂ ಕಟ್ಟಿದ ಮನೆ ಮಣ್ಣು ಪಾಲಾಗಿ ಇಂದು ಎರಡು ಕಾಲುಗಳಿಲ್ಲದೆ ದೈನಂದಿನ ಜೀವನ ನಡೆಸಲು ಪರದಾಡುತ್ತಿರುವ ಅಶ್ವಿನಿ ಅವರ ಪರಿಸ್ಥಿತಿ ಕಂಡು ಶಾಸಕ ಕಿಶೋರ್ ಕುಮಾರ್ ಅವರು ತೀವ್ರ ಭಾವುಕರಾದರು.


ಅಶ್ವಿನಿ ಅವರ ಕಣ್ಣೀರು ಒರೆಸಿ ದೈರ್ಯ ತುಂಬಿದ ಶಾಸಕರು ನೀವು ಒಂಟಿಯಲ್ಲ ಈ ಕಷ್ಟದ ಸಮಯದಲ್ಲಿ ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ ನೀವು ಕಳೆದುಕೊಂಡಿರುವ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ ಆದರೆ ನಿಮ್ಮ ಮುಂದಿನ ಬದುಕಿಗೆ ಆಸರೆಯಾಗಿ ನಿಲ್ಲುವ ಜವಾಬ್ದಾರಿ ನಮ್ಮದಾಗಿದೆ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸರ್ಕಾರದಿಂದ ನಿಮಗೆ ಸಿಗಬೇಕಾದ ಹಕ್ಕು ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನಡೆಯುವ ಪ್ರತಿಯೊಂದು ಹೋರಾಟದಲ್ಲೂ ನಾನು ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಆಶ್ವಾಸನೆ ನೀಡಿದರು. ಇದೇ ಸಂದರ್ಭದಲ್ಲಿ ಅಶ್ವಿನಿಯವರ ವೈದ್ಯಕೀಯ ವೆಚ್ಚಗಳು ಹಾಗೂ ಪ್ರಸ್ತುತ ಜೀವನ ನಿರ್ವಹಣೆಯ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು ಜಿಲ್ಲಾಡಳಿತದಿಂದ ಹಾಗೂ ಸರ್ಕಾರದ ಮಟ್ಟದಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರಕ್ಷಣಾ ವೇ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ಜಿಲ್ಲೆಯ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್, ದಯಾನಂದ ತೊಕ್ಕೊಟ್ಟು, ಉಪಾಧ್ಯಕ್ಷರಾದ ಸುಮನ ಹರೀಶ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷರಾದ ಮುರಳಿಧರ ಕೊಣಾಜೆ, ರೈತ ಮೋರ್ಚ ಅಧ್ಯಕ್ಷರಾದ ಪದ್ಮನಾಭ ಗಟ್ಟಿ, ಮಂಡಲದ ಕೋಶಾಧಿಕಾರಿ ಸುಮಲತಾ ಕೊಣಾಜೆ, ಶಕ್ತಿಕೇಂದ್ರ ಪ್ರಮುಖ ಸುಧಾಕರಗಟ್ಟಿ ಮತ್ತಿತರರು ಉಪಸ್ಥಿತರಿದ್ದರು

ಬೆಳ್ತಂಗಡಿ : 2023 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ತಡವಾಗಿ ಬೆಳಕಿಗೆ, ಪೊಲೀಸರಿಂದ ತನಿಖೆ

file photo

ಬೆಳ್ತಂಗಡಿ ಸಮೀಪದ ಡ್ಯಾಂ ಒಂದರ ಬಳಿ 2023ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ವೇಣೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ತಮ್ಮ ಮಗಳ ಮೇಲೆ ಸಂಬಂಧಿಕನೊಬ್ಬ ಹಾಗೂ ಆತನ ಸ್ನೇಹಿತನಿಂದ ದೌರ್ಜನ್ಯ ಮತ್ತು ಜೀವಬೆದರಿಕೆ ನಡೆದಿರುವುದನ್ನು ಪೋಷಕರು ಇತ್ತೀಚೆಗೆ ಗಮನಿಸಿ, ಜೂನ್ 23 ರಂದು ದೂರು ನೀಡಿದ್ದಾರೆ.

2023 ರಲ್ಲಿ, ಈ ಬಾಲಕರು ಬೆಳ್ತಂಗಡಿಯ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ ಸಂತ್ರಸ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಹಾಗೂ ಬಾಲಕಿಗೆ ಜೀವಬೆದರಿಕೆ ಒಡ್ಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 376, 376AB, 376DB, 506, 34 ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ಕಾಸರಗೋಡಿನ ಯುವಕ ಮೃತ್ಯು

ಫೋಟೋ ಕೃಪೆ : Mangalore today news

ನೆಲ್ಯಾಡಿಯ ಪೆರಿಯಶಾಂತಿ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಕಾಸರಗೋಡು ಜಿಲ್ಲೆಯ ಎರಿಕಲಂ ನಿವಾಸಿ ರಾಜೇಶ್ ಬಿ. (33) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೊಕ್ಕಡದ ಸಂಗಮ್ ಪಿಕಪ್ ಸವಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ನೆಲ್ಯಾಡಿ ಹೊರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು : ಜಿಲ್ಲಾಧಿಕಾರಿಯವರಿಂದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮಕ್ಕಳ ನಾಪತ್ತೆ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಮತ್ತು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
​ಅಂಕಿಅಂಶಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 86 ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 79 ಮಕ್ಕಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. ಬಾಕಿ ಇರುವ ಮಕ್ಕಳನ್ನು ಶೀಘ್ರವಾಗಿ ಪತ್ತೆಹಚ್ಚಲು ತನಿಖೆ ಮಾಡುವಂತೆ ಅವರು ಒತ್ತಾಯಿಸಿದರು.

ಜಿಲ್ಲೆಯಲ್ಲಿನ 69 ಮಕ್ಕಳ ಕಲ್ಯಾಣ ಸಂಸ್ಥೆಗಳಲ್ಲಿ 2,581 ಮಕ್ಕಳು ವಾಸಿಸುತ್ತಿದ್ದಾರೆ. ಈ ಸಂಸ್ಥೆಗಳಲ್ಲಿನ ಕಟ್ಟಡಗಳ ಸ್ಥಿತಿಗತಿ, ಗಾಳಿ-ಬೆಳಕು ಮತ್ತು ಗುಣಮಟ್ಟದ ಆಹಾರದ ಬಗ್ಗೆ ಖಚಿತಪಡಿಸಿಕೊಳ್ಳಲು ಮಾಸಿಕ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು 24/7 ಉಚಿತ ತುರ್ತು ಮಕ್ಕಳ ಸಹಾಯವಾಣಿ ಸಂಖ್ಯೆ ‘1098’ ಅನ್ನು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸಬೇಕು. ಕಳೆದ ವರ್ಷ ಈ ಸಹಾಯವಾಣಿಗೆ 763 ಕರೆಗಳು ಬಂದಿದ್ದು, ಪ್ರತಿಯೊಂದು ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.

​ಬಾಲಕಿಯರ ನಿಲಯಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮತ್ತು ಆಪ್ತಸಮಾಲೋಚನೆ ನಡೆಸಬೇಕು. ಲೈಂಗಿಕ ದೌರ್ಜನ್ಯ ಅಥವಾ ಆರೋಗ್ಯ ಸಮಸ್ಯೆಯ ವರದಿಗಳಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು.
​ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನರ್ಸರಿ ಮತ್ತು ಬೇಬಿ ಸಿಟ್ಟಿಂಗ್ ಕೇಂದ್ರಗಳನ್ನು ನೋಂದಾಯಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದರು.
ಹೋಟೆಲ್‌ಗಳು ಮತ್ತು ಅಂಗಡಿಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ತಪಾಸಣೆ ನಡೆಸಲು ಕಾರ್ಮಿಕ ಇಲಾಖೆಗೆ ಸೂಚಿಸಲಾಯಿತು. ನಿಯಮ ಉಲ್ಲಂಘಿಸಿದ 92 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
POCSO ಕಾಯ್ದೆಯಡಿ ಸಂತ್ರಸ್ತರಿಗೆ ಪರಿಹಾರ, ಅನಾಥ ಮತ್ತು ಏಕ ಪೋಷಕರ ಮಕ್ಕಳಿಗೆ ಮಾಸಿಕ 4,000 ರೂ. ಧನಸಹಾಯ, HIV ಸೋಂಕಿತ ಮಕ್ಕಳಿಗೆ 2,000 ರೂ. ಮತ್ತು ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ 3,500 ರೂ. ನೀಡಲಾಗುತ್ತಿದೆ.

ಉಪ್ಪಿನಂಗಡಿ : ಅಕ್ರಮ ಜಾನುವಾರು ಸಾಗಾಟ, ಇಬ್ಬರ ಬಂಧನ

ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಈಚರ್ ಲಾರಿಯನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ಪರಾರಿಯಾಗಿದ್ದಾನೆ. ಲಾರಿಯಲ್ಲಿದ್ದ 16 ಜಾನುವಾರುಗಳನ್ನು ರಕ್ಷಿಸಲಾಗಿದೆ.

​ಹಾಸನದಿಂದ ಕೇರಳದ ಪಾಲಕ್ಕಾಡ್‌ಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ಪೊಲೀಸರು 34 ನೆಕ್ಕಿಲಾಡಿಯ ಆನೆಬೈಲ್‌ನಲ್ಲಿ ತಡೆಹಿಡಿದಿದ್ದಾರೆ.

ಈ ಪ್ರಕರಣದಲ್ಲಿ ಲಾರಿ ಚಾಲಕ ಪರ್ದಿನ್ ಖಾನ್ ಮತ್ತು ಜಾವೀದ್ ಪಾಷಾ ಎಂಬುವವರನ್ನು ಬಂಧಿಸಲಾಗಿದೆ. ಇದೇ ವೇಳೆ, ರೆಹಮಾನ್ ಹೊಸೂರು ಎಂಬ ವ್ಯಕ್ತಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ.

ಜೂನ್ 17ರ ನಸುಕಿನ ಜಾವ ಉಪನಿರೀಕ್ಷಕ ಸುತೇಶ್ ಕೆ.ಪಿ. ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದಾಗ, ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 16 ಜಾನುವಾರುಗಳನ್ನು ಪತ್ತೆ ಹಚ್ಚಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಚಾರಣೆ ನಡೆಸಿದಾಗ, ಆರೋಪಿಗಳು ಹಾಸನ ಸಂತೆಯಲ್ಲಿ ಜಾನುವಾರುಗಳನ್ನು ಖರೀದಿಸಿ ಕೇರಳಕ್ಕೆ ಸಾಗಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

ಪುತ್ತೂರು : ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ

ಪುತ್ತೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಜೂನ್ 18, ಗುರುವಾರ ಬೆಳಗ್ಗೆ 9.30 ಕ್ಕೆ ಕಬಕ ನಿಲ್ದಾಣಕ್ಕೆ ಭೇಟಿ ನೀಡುವರು.

ಅವರು ಪುತ್ತೂರು ಕ್ಷೇತ್ರದ ಹಲವು ಕಾಮಗಾರಿಗಳ ವೀಕ್ಷಣೆ ಮಾಡಲಿರುವರು. ಜೊತೆಗೆ ರೈಲ್ವೆ ಕಾಮಗಾರಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.

ಸುಮಾರು 4.5 ಕೋತಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ರೈಲ್ವೆ ನಿಲ್ದಾಣದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಕ್ಷೇತ್ರದ ಬೇರೆ ಬೇರೆ ಕಡೆ ಸಂಸದರ ನಿಧಿಯ ಕಾಮಗಾರಿಗಳಿಗೆ ಶೀಲಾನ್ಯಾಸಗಯ್ಯಲಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಝಾಕೀರ್ ಸವಣೂರು : ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು

ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ 2022 ಜುಲೈ 26 ರಂದು ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ಅಕ್ಷಯ ಚಿಕನ್ ಸೆಂಟರ್ ನಡೆಸುತ್ತಿದ್ದರು. ಆ ಅಂಗಡಿಯ ಎದುರೇ ಕೊಲೆ ನಡೆದಿತ್ತು. ಅದರಲ್ಲಿ 26 ಮಂದಿಯನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದರು. ಅದರಲ್ಲಿ ಈಗ 18 ನೆ ಆರೋಪಿ ಝಾಕೀರ್ ಸವಣೂರು (35) ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಈ ಹಿಂದೆ ಸೋಮವಾರಪೇಟೆಯ ಎಚ್. ವೈ ರಿಯಾಜ್ ಎಂಬಾತನಿಗೆ ಜಾಮೀನು ಸಿಕ್ಕಿತ್ತು. ಇವನು ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂಬ ಕಾರಣಕ್ಕೆ ಬಂಧಿಸಲಾಗಿತ್ತು. ಎಚ್. ವೈ ರಿಯಾಜ್ ಪ್ರಕರಣದ 26 ನೇ ಆರೋಪಿಯಾಗಿದ್ದಾನೆ.

ಈಗ ಜಾಮೀನು ಪಡೆದಿರುವ ಆರೋಪಿ ಝಾಕೀರ್ ಸವಣೂರು (35) ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾದವರಲ್ಲಿ ಒಬ್ಬನಾಗಿದ್ದು, ಪ್ರಕರಣದ ಆರಂಭದಲ್ಲೇ ಬಂಧಿಸಲ್ಪಟ್ಟಿದ್ದಾನೆ. ಈತನನ್ನು ಬೆಳ್ಳಾರೆಯ ಶಫೀಕ್ ಎಂಬಾತನೊಂದಿಗೆ ಜುಲೈ 28 ರಂದು ವಶಕ್ಕೆ ಪಡೆದಿದ್ದರು.

ಪುತ್ತೂರು, ವಂಚನೆ ಪ್ರಕರಣ: ವಿವಾದವನ್ನು ಬಗೆಹರಿಸಲು ಹೈಕೋರ್ಟ್ ಮಧ್ಯಸ್ಥಿಕೆಗೆ ಸೂಚನೆ

ಕರ್ನಾಟಕ ಹೈಕೋರ್ಟ್‌ನಲ್ಲಿ ಇಂದು ಬಿಜೆಪಿ ನಾಯಕರೊಬ್ಬರ ಪುತ್ರನ ವಿರುದ್ಧ ಸಂಬಂಧದ ನೆಪದಲ್ಲಿ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ.

​ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪುತ್ತೂರಿನ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು, ಈ ವಿವಾದವನ್ನು ಮಾತುಕತೆಯ (mediation) ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ.

​ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪಿ. ಪಿ. ಹೆಗ್ಡೆ ಅವರು, ಈ ವಿಷಯವನ್ನು ಪರಸ್ಪರ ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಸಲ್ಲಿಕೆಯನ್ನು ಗಮನದಲ್ಲಿಟ್ಟುಕೊಂಡ ನ್ಯಾಯಾಲಯವು, ದೂರುದಾರರು, ಆರೋಪಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳು ಜೂನ್ 19 ರಂದು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರದ (Mediation Centre) ಮುಂದೆ ಹಾಜರಾಗಬೇಕೆಂದು ನಿರ್ದೇಶನ ನೀಡಿತು.

​ಹೈಕೋರ್ಟ್‌ನ ಹಿಂದಿನ ನಿರ್ದೇಶನದಂತೆ, ಆರೋಪಿ ಕೃಷ್ಣ ಜೆ. ರಾವ್ ಅವರು ಮೊದಲ ತಿಂಗಳ ಪಾವತಿಯಾಗಿ 75,000 ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿದ್ದರು. ಈ ಠೇವಣಿ ಮೊತ್ತವನ್ನು ತಕ್ಷಣವೇ ದೂರುದಾರರಿಗೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ, ಎರಡನೇ ತಿಂಗಳ ಪಾವತಿಗಾಗಿ ಹೆಚ್ಚುವರಿಯಾಗಿ 75,000 ರೂ.ಗಳನ್ನು ಮುಂದಿನ ನಾಲ್ಕು ದಿನಗಳ ಒಳಗೆ ಪಾವತಿಸುವಂತೆ ಆರೋಪಿಗೆ ಹೈಕೋರ್ಟ್ ಸೂಚಿಸಿದೆ.

​ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದೆ. ಮಧ್ಯಸ್ಥಿಕೆ ಕೇಂದ್ರವು ಸಲ್ಲಿಸುವ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಿರ್ಧರಿಸಲಾಗುತ್ತದೆ.

ಬಜ್ಪೆ ರಸ್ತೆ ಜಲಾವೃತ : ಸಾರ್ವಜನಿಕರ ಪರದಾಟ

ಇಂದು ಸುರಿದ ಭಾರಿ ಮಳೆಯಿಂದಾಗಿ ಬಜ್ಪೆ ರಸ್ತೆಯು ಸಂಪೂರ್ಣವಾಗಿ ಜಲಾವೃತವಾಗಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ರಸ್ತೆಯ ಹಲವೆಡೆ ನೀರು ನುಗ್ಗಿದ್ದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಓಡಾಟ ನಡೆಸಲು ಹರಸಾಹಸ ಪಡುವಂತಾಯಿತು.

​ರಸ್ತೆಯಲ್ಲಿ ನೀರು ಹೆಚ್ಚಿನ ಮಟ್ಟದಲ್ಲಿ ಶೇಖರಣೆಯಾದ ಕಾರಣ, ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಪ್ರಯಾಣಿಸುವ ಅನಿವಾರ್ಯತೆ ಎದುರಾಯಿತು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆಯೇ ಎಂಬ ಪ್ರಶ್ನೆಯನ್ನು ಈ ಅಕಾಲಿಕ ಪ್ರವಾಹವು ಹುಟ್ಟುಹಾಕಿದೆ. ಕೂಡಲೇ ಮುಚ್ಚಿಹೋಗಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

​ಕರಾವಳಿ ಭಾಗದಲ್ಲಿ ಮಾನ್ಸೂನ್ ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.