ಬಿಜೆಪಿ ಕುಂಬಳೆ ಪಂಚಾಯತ್ ನ ನೂತನ ಕಟ್ಟಡ ಎಂ.ಎಲ್ ಅಶ್ವಿನಿಯವರಿಂದ ಉದ್ಘಾಟನೆ

ಕುಂಬಳೆಯಲ್ಲಿ ನಡೆದ ಬಿಜೆಪಿ ಪಂಚಾಯತ್ ಸಮಿತಿಯ ನೂತನ ಕಚೇರಿ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಹಿರಿಯ ನಾಯಕರಾದ ವಿ. ರವೀಂದ್ರನ್ ಅವರು ಧ್ವಜಾರೋಹಣ ನೆರವೇರಿಸಿದರು. ಕುಂಬಳೆ ಪಂಚಾಯತ್ ದಕ್ಷಿಣ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಜಿತ್ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

​ಈ ಸಂದರ್ಭದಲ್ಲಿ ಜನಸಂಘ ಮತ್ತು ಬಿಜೆಪಿಯ ಹಿರಿಯ ಹಾಗೂ ಆರಂಭಿಕ ಕಾರ್ಯಕರ್ತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಚಂದ್ರ ಭಂಡಾರಿ (ರಾಜ್ಯ ಸಮಿತಿ ಸದಸ್ಯ), ಸುಬ್ಬಯ್ಯ ರೈ (ತುರ್ತು ಹೋರಾಟಗಾರ ಮತ್ತು ಜನಸಂಘದ ಕಾರ್ಯಕರ್ತ), ಮುರಲೀಧರ ಯಾದವ್ (ಜಿಲ್ಲಾ ಉಪಾಧ್ಯಕ್ಷ), ವಸಂತಮಯ್ಯ (ಮಂಡಲ ಪ್ರಧಾನ ಕಾರ್ಯದರ್ಶಿ), ವಿಕ್ರಮ್ ಪೈ ಹಾಗೂ ಪ್ರೇಮಾವತಿ (ಮಂಡಲ ಉಪಾಧ್ಯಕ್ಷರು), ಶಿವಪ್ರಸಾದ್ ರೈ (ಕುಂಬಳೆ ಪಂಚಾಯತ್ ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ) ಸೇರಿದಂತೆ ಪಂಚಾಯತ್ ಪ್ರತಿನಿಧಿಗಳು, ವಿನೋದ್ ಕೊಯಿಪ್ಪಾಡಿ ಕಡಪರ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

‘ಪ್ರಿಯದರ್ಶಿನಿ’ ಯೋಜನೆ, ಅಂತರರಾಜ್ಯ ಬಸ್ಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ : ಕೇರಳ ಕೆಎಸ್ಆರ್ಟಿಸಿ

‘ಪ್ರಿಯದರ್ಶಿನಿ’ ಯೋಜನೆಯು ಯುಡಿಎಫ್ ನ ಚುನಾವಣಾ ಭರವಸೆಯಾಗಿದ್ದು, ಕಾಸರಗೋಡು ಜಿಲ್ಲೆಗೂ ವಿಸ್ತರಿಸಲ್ಪಟ್ಟಿದೆ. ಇದರ ಅಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ.

ಜೂನ್ 15 ರ ಬೆಳಿಗ್ಗೆ 9 ಗಂಟೆಯಿಂದ ಈ ಸೌಲಭ್ಯವು ಜಾರಿಗೆ ಬರಲಿದೆ.

  • ವ್ಯಾಪ್ತಿ : ಜಿಲ್ಲೆಯ 75 ಬಸ್ ಸರ್ವೀಸ್‌ಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ. ಕಾಸರಗೋಡು-ಮಂಗಳೂರು, ಕಾಸರಗೋಡು-ಸುಳ್ಯ ಮತ್ತು ಕಾಸರಗೋಡು-ಪುತ್ತೂರು ಅಂತರರಾಜ್ಯ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಇದು ಅನ್ವಯಿಸುತ್ತದೆ. ​ಕಾಸರಗೋಡಿನ ಟೌನ್ ಟು ಟೌನ್, ಲಿಮಿಟೆಡ್ ಮತ್ತು ಆರ್ಡಿನರಿ ಬಸ್‌ಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
  • ಉದ್ಘಾಟನೆ: ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಈ ಯೋಜನೆಯನ್ನು ಉದ್ಘಾಟಿಸಲಿದ್ದು, ಕಾಸರಗೋಡಿನಲ್ಲಿ ಶಾಸಕ ಎನ್. ಎ. ನೆಲ್ಲಿಕುನ್ನು ಮತ್ತು ಉಪ್ಪಳದಲ್ಲಿ ಶಾಸಕ ಎ. ಕೆ. ಅಶ್ರಫ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
  • ಉಪಯೋಗ: ನಿತ್ಯ ಪ್ರಯಾಣಿಸುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಈ ಯೋಜನೆಯು ಹೆಚ್ಚಿನ ಅನುಕೂಲವನ್ನು ನೀಡಲಿದೆ.
ಕೇರಳ ಮುಖ್ಯಮಂತ್ರಿ ವಿ. ಡಿ ಸತೀಶನ್ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ – ಕುಡಿದ ಮತ್ತಿನಲ್ಲಿ ಕೃತ್ಯ

ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಟ್ಟಿಂಗಲ್ ನಿವಾಸಿ ಸೋನಿ ಥಾಮಸ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಅಜ್ಞಾತ ವ್ಯಕ್ತಿಯೊಬ್ಬ ತಿರುವನಂತಪುರದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದನು. ತನಗೆ ಸತೀಶನ್ ಇಷ್ಟವಿಲ್ಲ ಎಂಬ ಕಾರಣವನ್ನು ಆರೋಪಿ ನೀಡಿದ್ದನು.

ಪೊಲೀಸರು ಫೋನ್ ಸಿಗ್ನಲ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಯನ್ನು ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ. ಆರೋಪಿಯು ಕರೆ ಮಾಡಿದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯಲಿದೆ.

ಬಸ್ ಉಚಿತ ಪ್ರಯಾಣ : ಖಾಸಗಿ ಬಸ್ ಮಾಲಕರ ವಿರೋಧ ಹಾಗೂ ಮುಷ್ಕರ

ಕೇರಳ ಆರ್ ಟಿ ಸಿ (KSRTC) ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಸರ್ಕಾರದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರ ಸಂಘವು ಅದನ್ನು ತೀವ್ರವಾಗಿ ವಿರೋಧಿಸಿದೆ. ಈ ನಿರ್ಧಾರದಿಂದಾಗಿ ಖಾಸಗಿ ಬಸ್ ಸೇವೆಯು ನಷ್ಟದಲ್ಲಿದೆ ಎಂದು ತಿಳಿಸಿರುವ ಮಾಲೀಕರು, ಬಜೆಟ್‌ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಹಿಳಾ ಪ್ರಯಾಣಿಕರ ಕೊರತೆಯಿಂದಾಗಿ ಖಾಸಗಿ ಬಸ್‌ಗಳು ಭಾರಿ ನಷ್ಟವನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳ ಪ್ರಯಾಣ ದರವನ್ನು ಕಳೆದ 15 ವರ್ಷಗಳಿಂದ ಹೆಚ್ಚಿಸದಿರುವುದು ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿಗೆ ನೀಡುವ ಸೌಲಭ್ಯಗಳನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಮೀನುಗಾರರಿಗೆ ನೀಡುವಂತೆ ಡೀಸೆಲ್ ಮೇಲೆ ಸಬ್ಸಿಡಿ ನೀಡಬೇಕು ಮತ್ತು ಬಸ್‌ಗಳ ವಿಮೆಯನ್ನು ಸರ್ಕಾರವೇ ಭರಿಸಬೇಕೆಂದು ಒತ್ತಾಯಿಸಿದ್ದಾರೆ. ಜೂನ್ 19ರ ನಂತರ ಬಸ್ ಮಾಲೀಕರ ಜಂಟಿ ಸಭೆ ನಡೆಯಲಿದ್ದು, ಸರ್ಕಾರವು ಬಜೆಟ್‌ನಲ್ಲಿ ಸೂಕ್ತ ಪ್ಯಾಕೇಜ್ ಘೋಷಿಸದಿದ್ದರೆ ಮುಷ್ಕರವನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕೇರಳದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಜೂನ್ 15ರಿಂದ ‘ಪ್ರಿಯದರ್ಶಿನಿ’ ಯೋಜನೆ ಆರಂಭ

ತಿರುವನಂತಪುರಂನಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಪ್ರಿಯದರ್ಶಿನಿ’ ಎಂಬ ಹೊಸ ಯೋಜನೆಯು ಜೂನ್ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

​ಆರಂಭಿಕವಾಗಿ, ಸಾಮಾನ್ಯ (ಆರ್ಡಿನರಿ) ಬಸ್‌ಗಳಲ್ಲಿ ಮಾತ್ರ ಈ ಉಚಿತ ಪ್ರಯಾಣದ ಸೌಲಭ್ಯ ಲಭ್ಯವಿರಲಿದೆ. ಮೊದಲ 100 ದಿನಗಳ ನಂತರ, ಇತರ ಬಸ್‌ಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಆದಾಯದ ಮಾನದಂಡವಿಲ್ಲದೆ, ರಾಜ್ಯದ ಎಲ್ಲಾ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯಿಂದ ಕೆಎಸ್‌ಆರ್‌ಟಿಸಿಗೆ ವಾರ್ಷಿಕ ಸುಮಾರು 800 ಕೋಟಿ ರೂಪಾಯಿಗಳಷ್ಟು ಆರ್ಥಿಕ ಹೊರೆಯಾಗಲಿದ್ದು, ಆ ವೆಚ್ಚವನ್ನು ಸರ್ಕಾರವೇ ನೇರವಾಗಿ ಭರಿಸಲಿದೆ.

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ಟಿ. ವೀಣಾ ಅವರಿಗೆ ಇ. ಡಿ. ಸಮನ್ಸ್ ನೋಟೀಸ್

ಸಿಎಂಆರ್‌ಎಲ್ (CMRL) ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರಿಗೆ ಜಾರಿ ನಿರ್ದೇಶನಾಲಯವು (ED) ಸಮನ್ಸ್ ಜಾರಿ ಮಾಡಿದೆ.

ಹಾಜರಾತಿ: ಶುಕ್ರವಾರ ಕೊಚ್ಚಿಯಲ್ಲಿರುವ ಇಡಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ.

ಸಂಬಂಧಿತ ವ್ಯಕ್ತಿಗಳು: ಟಿ. ವೀಣಾ ಅವರಲ್ಲದೆ, ಸಿಎಂಆರ್‌ಎಲ್‌ನ ಮಾಲೀಕ ಶಶಿಧರನ್ ಕರ್ತಾ ಅವರ ಪುತ್ರ ಶರಣ್ ಎಸ್. ಕರ್ತಾ ಸೇರಿದಂತೆ ಒಟ್ಟು ಒಂಬತ್ತು ಜನರಿಗೆ ಸಮನ್ಸ್ ನೀಡಲಾಗಿದೆ.

ಸೂಚನೆಗಳು: ವಿಚಾರಣೆಯ ಸಮಯದಲ್ಲಿ ಬ್ಯಾಂಕ್ ದಾಖಲೆಗಳು, ಆಸ್ತಿ ಮತ್ತು ವಾಹನಗಳಿಗೆ ಸಂಬಂಧಿಸಿದ ವಿವರಗಳು ಹಾಗೂ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸುವಂತೆ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಹಿನ್ನೆಲೆ: ಈ ಪ್ರಕರಣವು ಟಿ. ವೀಣಾ ಅವರ ಒಡೆತನದ ‘ಎಕ್ಸಲಾಜಿಕ್ ಸೊಲ್ಯೂಷನ್ಸ್’ ಮತ್ತು ಸಿಎಂಆರ್‌ಎಲ್ ಕಂಪನಿಯ ನಡುವಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದೆ. ಸಿಎಂಆರ್‌ಎಲ್ ಕಂಪನಿಯು ಯಾವುದೇ ಸೇವೆಗಳನ್ನು ಪಡೆಯದೆ ವೀಣಾ ಅವರ ಕಂಪನಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ವೀಣಾ ಮತ್ತು ಇತರರ ಮನೆಗಳ ಮೇಲೆ ದಾಳಿ ನಡೆಸಿದ ನಂತರ, ಇಡಿ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಕೊಟ್ಟಿಯೂರು : ಜನದಟ್ಟಣೆಯಿಂದ ಅವ್ಯವಸ್ಥೆ – ಕಣ್ಣೂರು ಡಿಐಜಿ

ಕೇರಳದ ಕೊಟ್ಟಿಯೂರು ಶಿವನ ದೇವಸ್ಥಾನದಲ್ಲಿ ಭಾನುವಾರ ಎಂದಿಗಿಂತ ಹೆಚ್ಚು, ಅಂದರೆ 1.70 ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದರು. ಆದರೆ ಒಂದು ದಿನಕ್ಕೆ 1.25 ಲಕ್ಷ ಭಕ್ತರಿಗಷ್ಟೇ ಅವಕಾಶ ಇರುವುದರಿಂದ ದಟ್ಟಣೆ ಉಂಟಾಯಿತು. ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ಭೇಟಿ ನೀಡಿದ್ದಾರೆ ಎಂದು ಕಣ್ಣೂರು ಡಿಐಜಿ ಯತೀಶ್ಚಂದ್ರ ಹೇಳಿದರು.

ಶನಿವಾರದ ಜನ ದಟ್ಟಣೆ ಯ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದೆ. ಆದರೆ ಭಾನುವಾರಕ್ಕೆ ನಾವು ಆದಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ವಾಹನಗಳಿಗೂ ಸರಿಯಾದ ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೂ ಭಕ್ತರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಮಾಹಿತಿಯ ಕೊರತೆಯೂ ಇದೆ. ಹಾಗಾಗಿ ಇವತ್ತಿನಿಂದ ಮೈಕ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವಂತೆ ಸ್ಥಳೀಯರ ಪುಂಡಾಟಿಕೆಯ ವರ್ತನೆಯ ಬಗ್ಗೆ ಮಾತನಾಡಿದರು. ಯಾರಿಗಾದರೂ ತೊಂದರೆಯಾಗಿದ್ದರೆ ದೂರು ನೀಡಬಹುದು. ಅವರು ಯಾರೆಂದು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ವರ್ಷದಲ್ಲಿ 27 ದಿನ ತೆರೆದಿರುವ ದೇಗುಲ, ಅರಣ್ಯದ ನಡುವೆ ಪುಣ್ಯಕ್ಷೇತ್ರ

ನದಿಯ ದಡದಲ್ಲಿ, ದಟ್ಟ ಅರಣ್ಯದ ನಡುವೆ ಇರುವ ಪುಣ್ಯಕ್ಷೇತ್ರ. ವರ್ಷದಲ್ಲಿ ಕೇವಲ 27 ದಿನಗಳ ಕಾಲ ಮಾತ್ರ ದರ್ಶನ ಪಡೆಯಲು ಸಾಧ್ಯವಿರುವ ಈ ಪುಣ್ಯಕ್ಷೇತ್ರವೇ ಕೇರಳದ ಕೊಟ್ಟಿಯೂರು ಶಿವಕ್ಷೇತ್ರ. ಇದೀಗ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ತಾಣದ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ.

ಈ ಕ್ಷೇತ್ರವು ‘ಇಕ್ಕರೆ’ ಮತ್ತು ‘ಅಕ್ಕರೆ’ ಎನ್ನುವ 2 ಭಾಗಗಳನ್ನು ಹೊಂದಿದೆ. ಇಕ್ಕರೆ ಕೊಟ್ಟಿಯೂರು ಯಾವಾಗಲೂ ತೆರೆದಿರುತ್ತದೆ. ಆದರೆ ಅಕ್ಕರೆ ಕೊಟ್ಟಿಯೂರು ಹಳೆಯ ಕಾಲದ ಸಂಪ್ರದಾಯದಂತೆ ತೆಂಗಿನ ಗರಿಗಳಿಂದ ಮಾಡಿದ ಜೋಪಡಿಯಾಗಿದೆ. ವೈಶಾಖ ಮಾಸದ ಆ ನಿರ್ದಿಷ್ಟ 27 ದಿನಗಳನ್ನು ಬಿಟ್ಟು, ಉಳಿದ ದಿನಗಳಲ್ಲಿ ಪ್ರವೇಶವೇ ಇಲ್ಲ. ಅರಣ್ಯದೊಳಗೂ ಮನುಷ್ಯರ ಪ್ರವೇಶವನ್ನು ನಿಶೇಧಿಸಲಾಗುತ್ತದೆ.

ಸತಿ ದೇವಿಯ ಕಥೆ ಮತ್ತು ನಿಗೂಢ ಕಲ್ಲುಗಳು

ಪುರಾಣಗಳ ಪ್ರಕಾರ, ಸತಿ ದೇವಿ ಅಗ್ನಿಕುಂಡಕ್ಕೆ ಹಾರಿ ದೇಹತ್ಯಾಗ ಮಾಡಿದ ಸ್ಥಳವಿದು ಎನ್ನಲಾಗುತ್ತದೆ. ಇಲ್ಲಿ ಸತಿ ದೇವಿ ಕುಳಿತಿದ್ದ ಪೀಠದಂತಹ ಗುರುತು ಇಂದಿಗೂ ಇದೆ. ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿನ ನದಿಯಲ್ಲಿ ಸಿಗುವ ವಿಶಿಷ್ಟ ಕಲ್ಲುಗಳು. ಆಶ್ಚರ್ಯವೇನೆಂದರೆ, ಈ ಕಲ್ಲುಗಳನ್ನು ಉಜ್ಜಿದರೆ ಶ್ರೀಗಂಧದ ಪರಿಮಳ ಬರುತ್ತದೆ. ಭಕ್ತರು ಈ ಕಲ್ಲುಗಳನ್ನೇ ದೇವರ ರೂಪದಲ್ಲಿ ಪೂಜಿಸುತ್ತಾರೆ.

ಶ್ರೀಮಂತಿಕೆಯಲ್ಲಿ ಕೇರಳದ ಎರಡನೇ ದೇಗುಲ

ಈ ಕ್ಷೇತ್ರವು ಅಪಾರ ಚಿನ್ನ ಮತ್ತು ಬೆಲೆಬಾಳುವ ಕಲ್ಲುಗಳ ಸಂಗ್ರಹವನ್ನು ಹೊಂದಿದೆ. ಇವುಗಳ ಕಾರಣದಿಂದಲೇ ಇದು ಕೇರಳದ ಎರಡನೇ ಅತೀ ಶ್ರೀಮಂತ ದೇಗುಲ ಎಂಬ ಖ್ಯಾತಿ ಪಡೆದಿದೆ. ಇಲ್ಲಿನ ಆನೆ ಮೇಲಿನ ಮೆರವಣಿಗೆಯಂತೂ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.