ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ಕಾಸರಗೋಡಿನ ಯುವಕ ಮೃತ್ಯು

ಫೋಟೋ ಕೃಪೆ : Mangalore today news

ನೆಲ್ಯಾಡಿಯ ಪೆರಿಯಶಾಂತಿ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಕಾಸರಗೋಡು ಜಿಲ್ಲೆಯ ಎರಿಕಲಂ ನಿವಾಸಿ ರಾಜೇಶ್ ಬಿ. (33) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೊಕ್ಕಡದ ಸಂಗಮ್ ಪಿಕಪ್ ಸವಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ನೆಲ್ಯಾಡಿ ಹೊರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಘ ಪರಿವಾರ ಕಾರ್ಯಕರ್ತ, ಆಟೋ ಚಾಲಕ ಸುರೇಶ್ ರೈ ನಿಧನ

ವಳಮಲೆ ನಿವಾಸಿ ಸುನಿ ಯಾನೆ ಸುರೇಶ್ ರೈ (43) ಇಂದು ಹೃದಯಾಘಾತದಿಂದ ನಿಧನರಾದರು. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು.

ನಿನ್ನೆ ರಾತ್ರೆ ಊಟ ಮಾಡಿ ಮಲಗಿದ ಅವರು, ಇಂದು ಬೆಳಗ್ಗೆ ಏಳದೆ ಇದ್ದಾಗ ಮನೆಯವರು ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ಕೊಂಡೊಯ್ದರು. ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಡಾಕ್ಟರು ಘೋಷಿಸಿದರು. ಸುರೇಶ ರೈ ಅವರು ಅವಿವಾಹಿತರಾಗಿದ್ದು, ತಂದೆ ರಾಧಾಕೃಷ್ಣ ರೈ ತಾಯಿ ಚಂದ್ರಾವತಿ, ಸಹೋದರ ಪ್ರಸನ್ನ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೂಲಿ ಕಾರ್ಮಿಕನ ಚಿಕಿತ್ಸೆಗೆ ನಿಮ್ಮ ಸಹಾಯದ ಅಗತ್ಯವಿದೆ.

ಕಾಸರಗೋಡು: ಎಣ್ಮಕಜೆ ಪಂಚಾಯತ್‌ನ ಬೆದ್ರಂಪಳ್ಳ ಸಮೀಪದ ಬಲ್ತಕಲ್ಲು ನಿವಾಸಿ, ಕೂಲಿ ಕಾರ್ಮಿಕ ಬಿ.ಕೆ. ರಾಜೇಶ್ ಅವರು ಇದೀಗ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗಾಗಿ ಸಾರ್ವಜನಿಕರ ಸಹಾಯ ಕೋರಿದ್ದಾರೆ.

ಘಟನೆಯ ಹಿನ್ನೆಲೆ:
ರಾಜೇಶ್ ಅವರು ಅಕಸ್ಮಾತ್ತಾಗಿ ತಲೆಯ ನರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಕಂಕನಾಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರನ್ನು ಪೂರ್ಣವಾಗಿ ಗುಣಮುಖರನ್ನಾಗಿಸಲು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಅದಕ್ಕೆ ಸುಮಾರು 3 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದಾರೆ.


​ಆರ್ಥಿಕ ಸಂಕಷ್ಟದಲ್ಲಿ ಕುಟುಂಬ:
ರಾಜೇಶ್ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಭರಿಸಲು ಕುಟುಂಬವು ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದು, ಇದೀಗ ದಾನಿಗಳ ಮೊರೆ ಹೋಗಿದ್ದಾರೆ.

ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ಬಯಸುವವರು ಕೆಳಕಂಡ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ:
​ಖಾತೆದಾರರ ಹೆಸರು: BHARATHI C
​ಬ್ಯಾಂಕ್ ಹೆಸರು: Kerala Grameena Bank, Perla Branch
​ಖಾತೆ ಸಂಖ್ಯೆ: 40583100004866
​IFSC ಕೋಡ್: KLGB0040583
​ಅಲ್ಲದೆ, ಚಿತ್ರದಲ್ಲಿರುವ 1000051838.jpg UPI ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೇರವಾಗಿ ಆರ್ಥಿಕ ನೆರವು ನೀಡಬಹುದಾಗಿದೆ.

ದಾನಿಗಳ ಸಣ್ಣ ಸಹಾಯವೂ ಈ ಕುಟುಂಬದ ಪಾಲಿಗೆ ದೊಡ್ಡ ಆಸರೆಯಾಗಲಿದೆ.

ಅಡೂರು ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಪಂಜಿನ ಮೆರವಣಿಗೆ ಮುಖಾಂತರ ಬೃಹತ್ ಪ್ರತಿಭಟನೆ. ಹಿಂದೂ ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್, ಅಭಿಷೇಕ್ ಭಟ್, ಸತ್ಯಶಂಕರ್ ಭಟ್, ಸಂಕಪ್ಪ ಬಿ ಹಾಗೂ ಭರತ್ ಜಿ ಮೇಲೆ ಪ್ರಕರಣ ದಾಖಲು.

ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಾವಚಿತ್ರ ಅಪಕೃತಿ ಮಾಡಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿರುದ್ಧ, ದಿನಾಂಕ 30.05.2026 ರಂದು ರಾತ್ರೆ ಅಡೂರು ಪೇಟೆಯಿಂದ ಬಸ್ ನಿಲ್ದಾಣದವರೆಗೆ ದೊಂದಿ ಮೆರವಣಿಗೆ (ಪಂಜಿನ ಮೆರವಣಿಗೆ) ಮಾಡುವ ಮೂಲಕ ಪ್ರತಿಭಟನೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ ಅಡೂರು ಘಟಕದ ವತಿಯಿಂದ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಸಹಸ್ರ ಮಂದಿ ಭಾಗವಹಿಸಿದ ಹಿನ್ನೆಲೆಯಲ್ಲಿ ಆದೂರು ಪೊಲೀಸ್ ಠಾಣೆ ವತಿಯಿಂದ ಪರವಾನಿಗೆ ರಹಿತ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪವನ್ನು ಹಾಕಲಾಗಿ ಸುಮೊಟೊ ಕೇಸನ್ನು ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರ ಮೇಲೆ ಹಾಕಲಾಗಿದೆ.

ಕುಂಬ್ಳೆ ಸೀಮೆಯ ದೇವಸ್ಥಾನ ಆಗಿರುವ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಾವಚಿತ್ರವನ್ನು ಅನ್ಯಮತೀಯ ಸಂಘಟನೆ ಆಗಿರುವ SSF ಇದರ ಕಾರ್ಯಕ್ರಮ ಒಂದರ ಪೋಸ್ಟರ್ ಬಳಕೆಗೆ ಉಪಯೋಸಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂಬ ಆರೋಪದ ಮೇರೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ವತಿಯಿಂದ ಈ ಬೃಹತ್ ಪ್ರತಿಭಟನೆ ನಡೆದಿದ್ದು, ಆದೂರು ಪೊಲೀಸ್ ವತಿಯಿಂದ ದಿನಾಂಕ 30.05.2026 ರಂದು FIR 224/2026 ರಂದೇ ಆದೂರು ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್, ಅಭಿಷೇಕ್ ಭಟ್ ಅಡೂರು, ಸತ್ಯಶಂಕರ ಭಟ್, ಭರತ್ ಅಡೂರು ಹಾಗೂ ಸಂಕಪ್ಪ ಭಂಡಾರಿ ಇವರುಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಕೇರಳದ ನಿರ್ಮಾಣ ವಲಯಕ್ಕೆ ಸಂಕಷ್ಟ: ಅನ್ಯರಾಜ್ಯಗಳಿಂದ ಮರಳದ ಬಂಗಾಳ ಮತ್ತು ಅಸ್ಸಾಂ ಮೂಲದ ಕಾರ್ಮಿಕರು.

ಕಾಸರಗೋಡಿನಲ್ಲಿ ಅನ್ಯರಾಜ್ಯದ ಕಾರ್ಮಿಕರ ಕೊರತೆಯಿಂದಾಗಿ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ:

  • ಕಾರ್ಮಿಕರ ವಲಸೆ: ಬಂಗಾಳ ಮತ್ತು ಅಸ್ಸಾಂನಿಂದ ಬಂದಿದ್ದ ಕಾರ್ಮಿಕರು ತಮ್ಮ ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ವಾಪಸ್ಸಾಗಿದ್ದಾರೆ. ಕೇವಲ 40% ಕಾರ್ಮಿಕರು ಮಾತ್ರ ಕೆಲಸಕ್ಕೆ ಮರಳಿದ್ದಾರೆ. ಉತ್ತರ ರಾಜ್ಯಗಳಲ್ಲಿ ಸುಗ್ಗಿ ಋತುವು ಆರಂಭವಾಗಿದೆ. ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಿವೆ.
  • ಹೆಚ್ಚಿದ ವೆಚ್ಚ: ಮರಳಿ ಬಂದಿರುವ ಕಾರ್ಮಿಕರು ಹೆಚ್ಚಿನ ವೇತನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಸಣ್ಣ ಗುತ್ತಿಗೆದಾರರು ಮತ್ತು ಮನೆ ನಿರ್ಮಿಸುವವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಅಲ್ಲದೆ, ಸ್ಥಳೀಯವಾಗಿ ನಿರ್ಮಾಣ ಕೆಲಸಕ್ಕೆ ಆಸಕ್ತಿ ತೋರುವವರ ಸಂಖ್ಯೆ ಬಹಳ ಕಡಿಮೆ ಇದೆ.
  • ಗುತ್ತಿಗೆದಾರರ ಬೇಡಿಕೆ: ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ. ನಿರ್ಮಾಣ ಕಾಮಗಾರಿಗಳನ್ನು ಸರಾಗಗೊಳಿಸಲು ‘ಕಾರ್ಮಿಕ ಬ್ಯಾಂಕ್’ (Labour Bank) ಸ್ಥಾಪಿಸುವುದು, ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸಬೇಕೆಂಬುದು ಇವರ ಪ್ರಮುಖ ಬೇಡಿಕೆಯಾಗಿದೆ.
  • ಯೋಜನೆಗಳ ವಿಳಂಬ: ಕಾರ್ಮಿಕರ ಕೊರತೆಯಿಂದಾಗಿ ಸರ್ಕಾರಿ ಅಭಿವೃದ್ಧಿ ಯೋಜನೆಗಳು ಮತ್ತು ಗುತ್ತಿಗೆ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದು ಗುತ್ತಿಗೆದಾರರಿಗೆ ದಂಡದ ಭೀತಿಯನ್ನು ತಂದೊಡ್ಡಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

ಹೂವಿನ ಕುಂಡಗಳಲ್ಲಿ ಹಣದ ಕಂತೆ… ಕಾಸರಗೋಡು RTO ಗೆ ವಿಜಿಲೆನ್ಸ್ ದಾಳಿ.

ಕಾಸರಗೋಡು : ಜೂ 5. ವಿಜಿಲೆನ್ಸ್ ಇಲಾಖೆಯು ಕಾಸರಗೋಡಿನ RTO ಕಚೇರಿಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದು, ಹೂವಿನ ಕುಂಡಗಳಲ್ಲಿ ಲಂಚದ ಹಣದ ಕಂತೆಗಳನ್ನು ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದೆ.

ಆರ್ ಟಿ ಓ ಕಚೇರಿಯ ಮುಂಭಾಗದಲ್ಲಿದ್ದ ಹೂವಿನ ಕುಂಡಗಳ ಅಡಿಯಲ್ಲಿ ಬಚ್ಚಿಡಲಾಗಿದ್ದ ಸುಮಾರು 17,150 ರೂ. ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಜಿಲೆನ್ಸ್ ಡಿವೈಎಸ್ಪಿ ಉನ್ನಿಕೃಷ್ಣನ್ ಈ ಕಾರ್ಯಚರಣೆಯ ನೇತೃತ್ವ ವಹಿಸಿದ್ದರು.

ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆ ಹಾಗೂ ಲಂಚ ನೀಡದೆ ಕಾಸರಗೋಡು ಆರ್ ಟಿ ಓ ಕಚೇರಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬ ದೂರುಗಳು ಬಂದಿವೆ.

ವಿವಿಧ ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳು, ಏಜೆಂಟರಿಂದ ಹಣದೊಂದಿಗೆ ಸಲ್ಲಿಸಲಾದ ಮನವಿಗಳು ಹಾಗೂ ಅರ್ಹ ನಾಗರಿಕರಿಗೆ ಸೇರಬೇಕಾದ ದಾಖಲೆಗಳನ್ನು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ಮತ್ತು ಕಾನ್ಯಂಗಾಡು ಆರ್ ಟಿ ಓ ಕಚೇರಿಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಕಚೇರಿಯ ಸಿಬ್ಬಂದಿಗಳು ಹಾಗೂ ಏಜೆಂಟರು ಸಾರ್ವಜನಿಕರಿಗೆ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಕಾನ್ಯಂಗಾಡು ಕಚೇರಿಯಿಂದಲೂ ಹಲವಾರು ದಾಖಲೆಗಳು ಹಾಗೂ ಅರ್ಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.