ಇರಾನ್ ನಲ್ಲಿರುವ ಭಾರತೀಯರಿಗೆ ದೇಶ ಬಿಟ್ಟು ಹೊರಡುವಂತೆ ಭಾರತ ಆದೇಶ

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಮಿಲಿಟರಿ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದರೂ, ಪರಸ್ಪರರ ಇಂಧನ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

  • ದೇಶ ತೊರೆಯುವಂತೆ ಸೂಚನೆ: ಪ್ರಸ್ತುತ ಇರಾನ್‌ನಲ್ಲಿ ಉದ್ಯೋಗ, ಶಿಕ್ಷಣ ಅಥವಾ ಪ್ರವಾಸದ ನಿಮಿತ್ತ ನೆಲೆಸಿರುವ ಎಲ್ಲಾ ಭಾರತೀಯರು, ಸಾಧ್ಯವಾದಷ್ಟು ಬೇಗ ದೇಶವನ್ನು ತೊರೆದು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ.
  • ವಿಮಾನ ಯಾನ ಸ್ಥಗಿತದ ಭೀತಿ: ಇರಾನ್ ತನ್ನ ವಾಯುಪ್ರದೇಶವನ್ನು ಯಾವುದೇ ಕ್ಷಣದಲ್ಲಿ ಬಂದ್ ಮಾಡುವ ಸಾಧ್ಯತೆ ಇರುವುದರಿಂದ, ವಿಮಾನ ಸಂಚಾರ ನಿಲ್ಲುವ ಮುನ್ನವೇ ನಿರ್ಗಮಿಸುವುದು ಸೂಕ್ತವಾಗಿದೆ.
  • ರಾಯಭಾರ ಕಚೇರಿಯಲ್ಲಿ ನೋಂದಣಿ: ತಕ್ಷಣಕ್ಕೆ ಮರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವವರು, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಮ್ಮ ವಿವರಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
  • ಭದ್ರತಾ ಕ್ರಮಗಳು: ಇರಾನ್‌ನಲ್ಲಿರುವ ಭಾರತೀಯರು ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಜನನಿಬಿಡ ಪ್ರದೇಶಗಳನ್ನು ತಪ್ಪಿಸಿ, ಸುರಕ್ಷಿತ ಕಟ್ಟಡಗಳು ಅಥವಾ ಆಶ್ರಯ ತಾಣಗಳಲ್ಲಿ ಉಳಿಯುವಂತೆ ಸಲಹೆ ನೀಡಲಾಗಿದೆ.

ತುರ್ತು ಸಂಪರ್ಕ:

ಭಾರತೀಯ ರಾಯಭಾರ ಕಚೇರಿಯು 24/7 ತುರ್ತು ಸಹಾಯವಾಣಿಯನ್ನು ಕಾರ್ಯರೂಪಕ್ಕೆ ತಂದಿದೆ. ಯಾವುದೇ ತುರ್ತು ಪರಿಸ್ಥಿತಿ ಉಂಟಾದಲ್ಲಿ ತಕ್ಷಣವೇ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಕೊಟ್ಟಿಯೂರು : ಜನದಟ್ಟಣೆಯಿಂದ ಅವ್ಯವಸ್ಥೆ – ಕಣ್ಣೂರು ಡಿಐಜಿ

ಕೇರಳದ ಕೊಟ್ಟಿಯೂರು ಶಿವನ ದೇವಸ್ಥಾನದಲ್ಲಿ ಭಾನುವಾರ ಎಂದಿಗಿಂತ ಹೆಚ್ಚು, ಅಂದರೆ 1.70 ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದರು. ಆದರೆ ಒಂದು ದಿನಕ್ಕೆ 1.25 ಲಕ್ಷ ಭಕ್ತರಿಗಷ್ಟೇ ಅವಕಾಶ ಇರುವುದರಿಂದ ದಟ್ಟಣೆ ಉಂಟಾಯಿತು. ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ಭೇಟಿ ನೀಡಿದ್ದಾರೆ ಎಂದು ಕಣ್ಣೂರು ಡಿಐಜಿ ಯತೀಶ್ಚಂದ್ರ ಹೇಳಿದರು.

ಶನಿವಾರದ ಜನ ದಟ್ಟಣೆ ಯ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದೆ. ಆದರೆ ಭಾನುವಾರಕ್ಕೆ ನಾವು ಆದಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ವಾಹನಗಳಿಗೂ ಸರಿಯಾದ ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೂ ಭಕ್ತರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ಬಂದವರಿಗೆ ಮಾಹಿತಿಯ ಕೊರತೆಯೂ ಇದೆ. ಹಾಗಾಗಿ ಇವತ್ತಿನಿಂದ ಮೈಕ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವಂತೆ ಸ್ಥಳೀಯರ ಪುಂಡಾಟಿಕೆಯ ವರ್ತನೆಯ ಬಗ್ಗೆ ಮಾತನಾಡಿದರು. ಯಾರಿಗಾದರೂ ತೊಂದರೆಯಾಗಿದ್ದರೆ ದೂರು ನೀಡಬಹುದು. ಅವರು ಯಾರೆಂದು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೋಟಿಗಟ್ಟಲೆ ಹಣ ವಂಚನೆ ಪ್ರಕರಣ: ತಂದೆ ಹಾಗೂ ಮಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು ಜೂ 8 : ಸರಕಾರಿ ಉದ್ಯೋಗದ ಆಮಿಷವೊಡ್ಡಿ ನಿರುದ್ಯೋಗಿ ಯುವಕರಿಂದ ಕೋಟ್ಯಂತರ ರೂ. ವಸೂಲಿ ಮಾಡುತ್ತಿದ್ದ ತಂದೆ-ಮಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ನಡೆಸಿ, ನಕಲಿ ನೇಮಕಾತಿ ಪತ್ರಗಳ ಮೂಲಕ ಸುಮಾರು 5.30 ಕೋಟಿ ರೂ. ವಂಚಿಸಿದ್ದ ಶಂಶಾದ್ ಬೇಗಂ ಮತ್ತು ಮನ್ಸೂರ್ ಅಹಮದ್ ಬಂಧನವಾಗಿದೆ. ಕೆಲಸದ ಭರವಸೆ ನೀಡಿ ತರಬೇತಿ ಹೆಸರಿನಲ್ಲಿ ಹಣ ಪೀಕುತ್ತಿದ್ದ ಅಪ್ಪ-ಮಗಳ ಖತರ್ನಾಕ್ ಜಾಲಕ್ಕೆ ಬಲಿಯಾದ ಹಲವರು, ಕೆಲಸಕ್ಕೆಂದು ತೆರಳಿದಾಗ ಮೋಸ ಹೋಗಿರುವುದು ದೃಢಪಟ್ಟಿದೆ.

ಸಂತ್ರಸ್ತರಿಂದ ದೂರು ದಾಖಲಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ಬರುವ ಮಧ್ಯವರ್ತಿಗಳ ನಂಬಿ ಹಣ ಕಳೆದುಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಸಿದೆ.

ಕೇರಳದ ನಿರ್ಮಾಣ ವಲಯಕ್ಕೆ ಸಂಕಷ್ಟ: ಅನ್ಯರಾಜ್ಯಗಳಿಂದ ಮರಳದ ಬಂಗಾಳ ಮತ್ತು ಅಸ್ಸಾಂ ಮೂಲದ ಕಾರ್ಮಿಕರು.

ಕಾಸರಗೋಡಿನಲ್ಲಿ ಅನ್ಯರಾಜ್ಯದ ಕಾರ್ಮಿಕರ ಕೊರತೆಯಿಂದಾಗಿ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ:

  • ಕಾರ್ಮಿಕರ ವಲಸೆ: ಬಂಗಾಳ ಮತ್ತು ಅಸ್ಸಾಂನಿಂದ ಬಂದಿದ್ದ ಕಾರ್ಮಿಕರು ತಮ್ಮ ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ವಾಪಸ್ಸಾಗಿದ್ದಾರೆ. ಕೇವಲ 40% ಕಾರ್ಮಿಕರು ಮಾತ್ರ ಕೆಲಸಕ್ಕೆ ಮರಳಿದ್ದಾರೆ. ಉತ್ತರ ರಾಜ್ಯಗಳಲ್ಲಿ ಸುಗ್ಗಿ ಋತುವು ಆರಂಭವಾಗಿದೆ. ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಿವೆ.
  • ಹೆಚ್ಚಿದ ವೆಚ್ಚ: ಮರಳಿ ಬಂದಿರುವ ಕಾರ್ಮಿಕರು ಹೆಚ್ಚಿನ ವೇತನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಸಣ್ಣ ಗುತ್ತಿಗೆದಾರರು ಮತ್ತು ಮನೆ ನಿರ್ಮಿಸುವವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಅಲ್ಲದೆ, ಸ್ಥಳೀಯವಾಗಿ ನಿರ್ಮಾಣ ಕೆಲಸಕ್ಕೆ ಆಸಕ್ತಿ ತೋರುವವರ ಸಂಖ್ಯೆ ಬಹಳ ಕಡಿಮೆ ಇದೆ.
  • ಗುತ್ತಿಗೆದಾರರ ಬೇಡಿಕೆ: ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ. ನಿರ್ಮಾಣ ಕಾಮಗಾರಿಗಳನ್ನು ಸರಾಗಗೊಳಿಸಲು ‘ಕಾರ್ಮಿಕ ಬ್ಯಾಂಕ್’ (Labour Bank) ಸ್ಥಾಪಿಸುವುದು, ಕಾರ್ಮಿಕರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸಬೇಕೆಂಬುದು ಇವರ ಪ್ರಮುಖ ಬೇಡಿಕೆಯಾಗಿದೆ.
  • ಯೋಜನೆಗಳ ವಿಳಂಬ: ಕಾರ್ಮಿಕರ ಕೊರತೆಯಿಂದಾಗಿ ಸರ್ಕಾರಿ ಅಭಿವೃದ್ಧಿ ಯೋಜನೆಗಳು ಮತ್ತು ಗುತ್ತಿಗೆ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದು ಗುತ್ತಿಗೆದಾರರಿಗೆ ದಂಡದ ಭೀತಿಯನ್ನು ತಂದೊಡ್ಡಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

ಮಂಗಳೂರು: ಫಲ್ಗುಣಿ ನದಿಯಲ್ಲಿ ಮಾಲಿನ್ಯದಿಂದ ಸತ್ತ, ಅರೆ ಪ್ರಜ್ಞಾವಸ್ಥೆಯಲ್ಲಿರುವ ಮೀನುಗಳು ಪತ್ತೆ

ನಗರದ ಬೊಕ್ಕಪಟ್ಣ ಪ್ರದೇಶಗಳ ಫಲ್ಗುಣಿ ನದಿಯ ದಡದಲ್ಲಿ, ಬೆಂಗ್ರೆ, ಸುಲ್ತಾನ್ ಬತ್ತೇರಿ ಹಾಗೂ ನೀರಿನಲ್ಲಿ ಶನಿವಾರ ಸತ್ತ ಮತ್ತು ಅರೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಮೀನುಗಳು ಪತ್ತೆಯಾಗಿದ್ದು, ಕಳವಳ ಮೂಡಿಸಿದೆ.

ರಾಸಾಯನಿಕಯುಕ್ತ ಕಲುಷಿತ ನೀರಿನಿಂದ ಮೀನುಗಳು ಸಾವನ್ನಪ್ಪಿರಬಹುದು ಎಂದು ಜನರು ಶಂಕಿಸಿದ್ದಾರೆ.ಸ್ಥಳೀಯ ಮೀನುಗಾರರು ಶನಿವಾರ ಮುಂಜಾನೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಈ ಮೀನುಗಳನ್ನು ಗಮನಿಸಿದ್ದಾರೆ. ಬೆಂಗ್ರೆ ಮತ್ತು ಸುಲ್ತಾನ್ ಬತ್ತೇರಿ ನಡುವಿನ ಸೇತುವೆ ಕಾಮಗಾರಿಗಾಗಿ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಈಗ ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಈ ತಡೆಗೋಡೆಯಿಂದಾಗಿ ಮರವೂರು ಅಣೆಕಟ್ಟಿನವರೆಗೂ ನೀರು ನಿಂತುಹೋಗಿತ್ತು.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಪುನರಾರಂಭಗೊಂಡಿದೆ. ಬೇಸಿಗೆಯ ಅವಧಿಯಲ್ಲಿ, ಕೈಗಾರಿಕೆಗಳ ತ್ಯಾಜ್ಯ, ಮಳೆನೀರಿನ ಚರಂಡಿಗಳು ಮತ್ತು ಮಹಾನಗರ ಪಾಲಿಕೆಯ ಒಳಚರಂಡಿ ಸಂಸ್ಕರಣಾ ಘಟಕದ ಕಲುಷಿತ ನೀರು ಈ ಭಾಗದಲ್ಲಿ ಸಂಗ್ರಹವಾಗಿ, ನೀರು ಕಪ್ಪಾಗಿ ಮತ್ತು ತೀವ್ರವಾಗಿ ಕಲುಷಿತಗೊಂಡಿತ್ತು. ಹೊಸ ನೀರು ಬಂದಾಗ ಮೀನುಗಳು ಮೇಲ್ಮುಖವಾಗಿ ಈಜುತ್ತವೆ. ಆದರೆ, ನೀರಿನಲ್ಲಿರುವ ರಾಸಾಯನಿಕ ಕಲುಷಿತ ಅಂಶಗಳಿಂದಾಗಿ ಮೀನುಗಳಿಗೆ ಉಸಿರಾಡಲು ಕಷ್ಟವಾಗಿ, ಹಲವು ಮೀನುಗಳು ಪ್ರಜ್ಞೆ ತಪ್ಪಿ ಬಿದ್ದಿದ್ದರೆ, ಇನ್ನು ಕೆಲವು ಮೃತಪಟ್ಟಿವೆ ಎಂದು ಮೀನುಗಾರರು ತಿಳಿಸಿದ್ದಾರೆ. ಒಳಚರಂಡಿ ಮತ್ತು ಇತರ ಕಲುಷಿತ ವಸ್ತುಗಳನ್ನು ನದಿಗೆ ಬಿಡುವುದರಿಂದ ನದಿ ತೀವ್ರವಾಗಿ ಮಲಿನಗೊಂಡಿದೆ. ಸೇತುವೆ ಕಾಮಗಾರಿಯ ತಡೆಗೋಡೆಯಿಂದಾಗಿ ಕಲುಷಿತ ನೀರು ನಿಂತಿದ್ದೇ ಈ ಸ್ಥಿತಿಗೆ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಕರಿಸದ ತ್ಯಾಜ್ಯ ನೀರನ್ನು ನದಿಗೆ ಬಿಡಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಪ್ರಾಂತ ಯೋಜನಾ ಬೈಠಕ್

ಹಿಂದೂ ಜಾಗರಣ ವೇದಿಕೆ, ಕರ್ನಾಟಕ, ದಕ್ಷಿಣ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅಂದರೆ, ಜೂನ್ 6,7 ರಂದು ಶಿವಮೊಗ್ಗ ಜಿಲ್ಲೆಯ ಆರ್ಯವೈಶ್ಯ ಸಂಸ್ಕೃತಿ ಸದನ, ಶಿವಮೊಗ್ಗ ಇಲ್ಲಿ ಪ್ರಾಂತ ಯೋಜನಾ ಬೈಠಕ್ ನಡೆಯಿತು. ಬೈಠಕಿನಲ್ಲಿ ಅಖಿಲಾ ಭಾರತದ ಪ್ರತಿನಿಧಿಗಳು, ಪ್ರತಿನಿಧಿಗಳು, ದಕ್ಷಿಣ ಪ್ರಾಂತದ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಅಖಿಲ ಭಾರತ ಟೋಳಿ ಸದಸ್ಯರಾದ ಜಗದೀಶ್ ಕಾರಂತ್ ಮತ್ತು ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿಶ್ವ ವರ್ಧನ್

ಪಾಟ್ನಾ, ಜೂ. 08  ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಈ ಪರೀಕ್ಷೆಗಾಗಿ ಕೆಲವರು ತಮ್ಮ ವೃತ್ತಿಯನ್ನೇ ತೊರೆಯುತ್ತಾರೆ. ಹೀಗೆ ತಮ್ಮ ನೇವೀಯ ವೃತ್ತಿಯನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದು ರ್‍ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದಾರೆ.

ವಿಶ್ವ ಅವರು ಪಾಟ್ನಾದ ಲೊಯೋಲಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. ನಂತರ ಇಂಡಿಯನ್ ಮ್ಯಾರಿಟೈಮ್ ಯೂನಿವರ್ಸಿಟಿಯಲ್ಲಿ ನಾಟಿಕಲ್ ಸೈನ್ಸ್ನಲ್ಲಿ ಪದವಿ ಪಡೆದು, ಶಿಕ್ಷಣದ ನಂತರ, ಮರ್ಚೆಂಟ್ ನೇವಿಗೆ ಸೇರಿ ಕೆಮಿಕಲ್ ಟ್ಯಾಂಕರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, 2019ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಯುಪಿಎಸ್‌ಸಿ ಪರೀಕ್ಷೆಯ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದರು.

2024ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 101ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿದರು. ಈ ಮೂಲಕ ಅನೇಕ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ವಿಶ್ವ ಅವರು ಮಾದರಿಯಾಗಿದ್ದಾರೆ.