ಶಿಶುವಿನ ಅಕ್ರಮ ದತ್ತು ಹಾಗೂ ಕಳ್ಳಸಾಗಣೆ : ಐವರ ಬಂಧನ

​ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ನಡೆದ ಅಕ್ರಮ ದತ್ತು ಹಾಗೂ ಶಿಶು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವೈದ್ಯರು ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿ ಬನ್ನಂಜೆಯ ನಿವಾಸಿ, ಉಡುಪಿ ಕಾಮತ್ ನರ್ಸಿಂಗ್ ಹೋಂ ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76) ಮತ್ತು ಉಡುಪಿಯ ಮೂಡುತೋನ್ಸೆ ಗ್ರಾಮದ ನೇಜಾರು ಸಂತೆಕಟ್ಟೆಯ ರಾಜೀವ್ ನಗರದ ನಿವಾಸಿ ಎಸ್. ಪ್ರಕಾಶ್ (50) ಎಂದು ಗುರುತಿಸಲಾಗಿದೆ. ಸುಮಾರು 11 ವರ್ಷಗಳಿಂದ ಮಕ್ಕಳಿಲ್ಲದ ಪ್ರಕಾಶ್ ಮತ್ತು ಪೂರ್ಣಿಮಾ ಎಂಬ ದಂಪತಿಗಳು, ಮಗುವೊಂದನ್ನು ಅಕ್ರಮವಾಗಿ ದತ್ತು ಪಡೆದಿದ್ದರು.

​ತನಿಖೆಯ ಪ್ರಕಾರ, ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರ ಸಹಾಯದಿಂದ ಈ ದಂಪತಿಗಳು ನವಜಾತ ಹೆಣ್ಣು ಶಿಶುವೊಂದನ್ನು ಅಕ್ರಮವಾಗಿ ಪಡೆದುಕೊಂಡಿದ್ದರು. ಇದಕ್ಕಾಗಿ ನಕಲಿ ಜನನ ಪ್ರಮಾಣಪತ್ರವನ್ನು ಸೃಷ್ಟಿಸಲಾಗಿತ್ತು. ಈ ಪ್ರಕರಣದಲ್ಲಿ ಶಿಶುವನ್ನು ಹಸ್ತಾಂತರಿಸಿದ ಆರೋಪದ ಮೇಲೆ ಸಂಪತ್ ಮತ್ತು ಸುಪ್ರೀತಿ ಎಂಬುವವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಈ ಅಕ್ರಮವನ್ನು ಪತ್ತೆಹಚ್ಚಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು: ಜೂನ್ ಅಂತ್ಯಕ್ಕೆ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ರೈಲು ಸಂಪರ್ಕಕ್ಕೆ ಇದ್ದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗುತ್ತಿವೆ. ಇದರಿಂದಾಗಿ ಕರಾವಳಿ ಹಾಗೂ ರಾಜ್ಯ ರಾಜಧಾನಿಗೆ ಇರುವ ಹೈಸ್ಪೀಡ್ ರೈಲು ಸಂಪರ್ಕದ ಕನಸು ನನಸಾಗಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯ ಸವಾಲಿನ 55 ಕಿಮೀ ಘಾಟ್ ವಿಭಾಗದಲ್ಲಿ ಜೂನ್ ಅಂತ್ಯದೊಳಗೆ ಪ್ರಾಯೋಗಿಕ ಸಂಚಾರ (Trial Run) ನಡೆಯಲಿದೆ.
ಘಾಟಿ ವಿಭಾಗದಲ್ಲಿ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀಗೆ ಸೀಮಿತಗೊಳಿಸಿರುವುದರಿಂದ, ಸುರಕ್ಷತೆಗಾಗಿ ವಂದೇ ಭಾರತ್ ರೈಲಿಗೆ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಈ ವಿಶೇಷ ರೇಕ್ ಸಿದ್ಧವಾಗಿದ್ದು, ಶೀಘ್ರವೇ ಕರ್ನಾಟಕಕ್ಕೆ ಆಗಮಿಸಲಿದೆ.


ರೈಲ್ವೆ ಸಚಿವಾಲಯದ ಆರ್‌ಡಿಎಸ್‌ಒ (RDSO) ಈ ಪರೀಕ್ಷೆಯನ್ನು ನಡೆಸಲಿದೆ. ಈ ಪರೀಕ್ಷೆ ಯಶಸ್ವಿಯಾದರೆ ಬೆಂಗಳೂರು-ಮಂಗಳೂರು ನಡುವಿನ ವೇಗದ ಮತ್ತು ಆರಾಮದಾಯಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ.
​ ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಈಗಾಗಲೇ ಡಿಸೆಂಬರ್ 2025ರಲ್ಲಿ ಪೂರ್ಣಗೊಂಡಿದ್ದು, ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ 5 ಟ್ರಿಪ್‌ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ. ಪ್ರಾಯೋಗಿಕ ಸಂಚಾರಗಳ ನಂತರ ಕರಾವಳಿಯ ಜನರಿಗೆ ವಂದೇ ಭಾರತ್ ರೈಲಿನ ಸೇವೆ ದೊರೆಯುವ ನಿರೀಕ್ಷೆಯಿದೆ.
​ ಈ ರೈಲು ಮಾರ್ಗವು ಆರಂಭವಾದರೆ ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ

ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ : ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ

ಭಟ್ಕಳದಲ್ಲಿ ಹಿಂದೂ ಯುವತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕನನ್ನು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸಿದ ಹಿಂದೂ ಮುಖಂಡರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕ್ರಮವನ್ನು ಖಂಡಿಸಿ ನೂರಾರು ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭಟ್ಕಳದಲ್ಲಿ ಹಿಂದೂ ಯುವತಿಯೊಬ್ಬಳನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಮುಸ್ಲಿಂ ಯುವಕನನ್ನು ತಡೆದು ವಿಚಾರಣೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ನಂತರ ಆ ಜೋಡಿಯನ್ನು ಭಟ್ಕಳ ನಗರ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ನೀಡಿದ್ದರು.

ಸಾರ್ವಜನಿಕರನ್ನು ತಡೆದು ಪ್ರಶ್ನಿಸಿದ ಮತ್ತು ಠಾಣೆಗೆ ಕರೆತಂದ ಆರೋಪದ ಮೇಲೆ, ಪೊಲೀಸರು ಆ ಹಿಂದೂ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮ್ಮ ಮೇಲಿನ ಪ್ರಕರಣವನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ಕಾರಿನಲ್ಲಿದ್ದ ಯುವಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ನೂರಾರು ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ ಪರಿಣಾಮ, ಹಾಗೂ ಮುಖಂಡರ ಮೇಲಿನ ಕೇಸ್ನಿಂದಾಗಿ ಭಟ್ಕಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಠಾಣೆಯ ಸುತ್ತಮುತ್ತ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿ ಯವರ ದಿಟ್ಟ ನಡೆಗೆ ಮಡ್ಯಾರು ಶ್ರೀ ರಾಮಾಶ್ರಯ ರಸ್ತೆ ಕಾಂಕ್ರೀಟಿಕರಣ ಪೂರ್ಣ

ಕೋಟೆಕಾರು ಪಟ್ಟಣ ಪಂಚಾಯತ್ ಮಡ್ಯಾರ್ ರಾಮಾಶ್ರಯ ನಿವಾಸಿಗಳು ರಸ್ತೆ ದುರಸ್ಥಿ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರ ಬಳಿ ಮನವಿ ಮಾಡಿದ ಕಾರಣ ಅಧ್ಯಕ್ಷ ನೆಲೆಯಲ್ಲಿ ರಸ್ತೆ ನಿರ್ಮಾಣ ಮಾಡಲು 5 ಲಕ್ಷ ರೂಪಾಯಿ ಅನುದಾನ ಇಟ್ಟಿರುತ್ತಾರೆ ಇದನ್ನು ಸಹಿಸದ ಶಾಸಕರ ಬೆಂಬಲಿಗರು ಎಲ್ಲಾ ಧರ್ಮದವರು ಸಂಚಾರ ನಡೆಸುವ ರಸ್ತೆಗೆ ಕೋಮು ಬಣ್ಣ ಹಚ್ಚಿ ರಸ್ತೆ ಕಾಮಗಾರಿ ತಡೆಯುವ ಯತ್ನ ನಡೆಸಿರುತ್ತಾರೆ.


ಇದು ವಿಫಲ ಆದಾಗ ಶಾಸಕರ ಬೆಂಬಲಿಗರ ಮೂಲಕ ರಾಮಾಶ್ರಯ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸದಂತೆ ಆ ರಸ್ತೆ ಖಾಸಗಿ ರಸ್ತೆ ಆಗಿದ್ದು ಕಾಮಗಾರಿ ನಡೆಸಬಾರದು ಎಂದು ಪಂಚಾಯತ್ ಗೆ ದೂರು ನೀಡಿರುತ್ತಾರೆ ಆದರೆ ಪಂಚಾಯತ್ ಅಭಿವೃದ್ಧಿ ನಿರ್ಮಾಣ ಕಾಮಗಾರಿ ಕೈಗೊಂಡ ರಸ್ತೆ ಸ್ಥಳವು ಸಾರ್ವಜನಿಕ ರಸ್ತೆ ಆದ ಕಾರಣ ಕಾಮಗಾರಿ ನಿಲ್ಲಿಸಲು ವಿಫಲ ಆಗಿರುತ್ತಾರೆ.


ಇವರ ರಾಜಕೀಯ ಕುತಂತ್ರ ಯಾವುದೇ ಫಲ ನೀಡದ ಕಾರಣ ಅಧ್ಯಕ್ಷರು ನಡೆಸುವ ಕಾಮಗಾರಿಯಿಂದ ಹತಾಶೆ ಗೊಂಡು ಸ್ಥಳೀಯ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕರ ಮೂಲಕ ಕಾಮಗಾರಿ ನಿಲ್ಲಿಸಲು ಯೋಜನಾ ನಿರ್ದೇಶಕರು ರವರಿಗೆ ಕರೆ ಮಾಡಿ ತಿಳಿಸಿ ಮುಖ್ಯಾಧಿಕಾರಿ ಯವರಿಗೆ ಒತ್ತಡ ಹಾಕಿರುತ್ತಾರೆ ಈ ಬಗ್ಗೆ ಅಧ್ಯಕ್ಷರ ಬಳಿ ಕಾಮಗಾರಿ ನಿಲ್ಲಿಸಲು ಮುಖ್ಯಾಧಿಕಾರಿಯವರು ಮೌಖಿಕವಾಗಿ ತಿಳಿಸಿದಾಗ ಅಧ್ಯಕ್ಷರು ಕಾಮಗಾರಿ ನಿಲ್ಲಿಸಲು ಯೋಜನಾ ನಿರ್ದೇಶಕರು ಅಥವಾ ಮುಖ್ಯಾಧಿಕಾರಿಯವರು ಲಿಖಿತ ರೂಪದಲ್ಲಿ ಕೊಡಲಿ ಕಾಮಗಾರಿ ನಿಲ್ಲಿಸಲು ಗುತ್ತಿಗೆ ದಾರರಿಗೆ ಸೂಚಿಸುತ್ತೇನೆ ಎಂದು ತಿಳಿಸಿದಾಗ ಆ ಪ್ರಯತ್ನ ಕೂಡ ವಿಫಲವಾದಾಗ ಹತಾಶೆ ಗೊಂಡ ಶಾಸಕರ ಬೆಂಬಲಿಗರು ಬೇರೆ ದಾರಿ ಇಲ್ಲದೆ ಬಾಕಿ ಉಳಿದ ಅವರ ಬೆಂಬಲಿಗರೇ ಖಾಸಗಿ ರಸ್ತೆ ಎಂದು ಆಕ್ಷೆಪನೆ ನೀಡಿದ ಅದೇ ರಸ್ತೆಗೆ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಶಾಸಕರ ಮೂಲಕ ಸೂಚಿಸಿರುತ್ತಾರೆ.
ಆದರೆ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷರು ಕ್ರಿಯಾ ಯೋಜನೆ ಅಗಲಿಲ್ಲ ಟೆಂಡರ್ ಆಗಲಿಲ್ಲ, ದಾನ ಪತ್ರ ಆಗಲಿಲ್ಲ ಎಂದು ಯಾವುದೇ ಸಣ್ಣ ಪುಟ್ಟ ರಾಜಕೀಯ ಮಾಡದ ಕಾರಣ ರಾಮಾಶ್ರಯ ರಸ್ತೆ ಕಾಮಗಾರಿ ಪೂರ್ಣಗೊಂಡಿರುತ್ತದೆ.

ಈ ಕೆಲಸ ವನ್ನು ಶಾಸಕರು ಮೊದಲಿಗೆ ಮಾಡಿದ್ದರೆ ಈ ಎಲ್ಲಾ ಗೊಂದಲ ಆಗ್ತಾ ಇರಲಿಲ್ಲ ಶಾಸಕರು ಪಂಚಾಯತ್ ಅಧ್ಯಕ್ಷರ ಬಳಿ ತಕರಾರು ಮಾಡಲು ಹೋಗಿ ಕೊನೆಗೆ ಬೇರೆ ದಾರಿ ಇಲ್ಲದೇ ಯಾವುದೇ ಅನುದಾನ ಇಡದೆ ಟೆಂಡರ್ ಕರೆಯದೆ ತುರ್ತಾಗಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚನೆ ನೀಡಿರುತ್ತಾರೆ.
ಶಾಸಕರು ಹಾಗೂ ಅವರ ಬೆಂಬಲಿಗರ ಈ ಕ್ಷುಲ್ಲಕ ರಾಜಕೀಯಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರು ಮಣಿಯದೆ ದಿಟ್ಟ ನಿರ್ಧಾರ ಕೈಗೊಂಡ ಕಾರಣ ರಾಮಾಶ್ರಯ ರಸ್ತೆಯ ಕಾಮಗಾರಿ ಸಂಪೂರ್ಣಗೊಂಡಿರುವುದು ಸಂತಸದ ವಿಷಯವಾಗಿದೆ. ರಾಮಾಶ್ರಯ ರಸ್ತೆ ನಿರ್ಮಾಣ ಕಾಮಗಾರಿಗೆ ಸಹಕರಿಸಿದ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಎಲ್ಲಾ ಸಂಬಂಧಪಟ್ಟವರಿಗೆ ಹೃತ್ಪೂರ್ವಕ ಧನ್ಯವಾದಗಳು.

ರಾಮಾಶ್ರಯ ರಸ್ತೆ ನಿವಾಸಿಗಳು
ವಾರ್ಡ್ ಸಂಖ್ಯೆ 11 ಮಡ್ಯಾರು

ಎಸ್ಐಟಿ ಅಧಿಕಾರಿಗಳ ಕಾರು ಪಲ್ಟಿ : ನಾಲ್ವರು ಅಧಿಕಾರಿಗಳಿಗೆ ಗಾಯ

ಧರ್ಮಸ್ಥಳ ಪ್ರಕರಣದ ತನಿಖಾ ಪ್ರಗತಿಯನ್ನು ಚರ್ಚಿಸಲು, ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಿಂದ ಚಿಕ್ಕಮಗಳೂರಿನ ಎಸ್‌ಪಿ ಹಾಗೂ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿಯಾಗಲು ಅಧಿಕಾರಿಗಳ ತಂಡವೊಂದು ಇನೋವಾ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್‌ನ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲೇ ಪಲ್ಟಿಯಾಗಿ ತಲೆಕೆಳಗಾಗಿದೆ.

​ಈ ದುರದೃಷ್ಟಕರ ಅಪಘಾತದಲ್ಲಿ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಪೊಲೀಸ್ ಸಿಬ್ಬಂದಿ (ಪಿಸಿ) ಮಂಜುನಾಥ್ ಹಾಗೂ ಕಾರಿನ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

​ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ವಾಹನ ಸವಾರರು ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದವರನ್ನು ಹೊರಗೆ ತೆಗೆಯಲು ನೆರವಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಘಾಟ್ ರಸ್ತೆಯ ಸಂಚಾರವನ್ನು ಸುಗಮಗೊಳಿಸಿದ್ದಾರೆ.

ಮಳೆ, ವಾತಾವರಣದ ವ್ಯತ್ಯಾಸದಿಂದ ರೋಗಗಳ ಹರಡುವಿಕೆ – ಕರಾವಳಿಯ ಜನರಿಗೆ ಆರೋಗ್ಯ ಸಮಸ್ಯೆಗಳ ಭೀತಿ

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅನಿಶ್ಚಿತ ಮಳೆಯಿಂದಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಿಸಿಲು ಮತ್ತು ತೇವಾಂಶದ ಏರುಪೇರಿನಿಂದಾಗಿ ಡೆಂಗ್ಯೂ, ವೈರಲ್ ಜ್ವರ, ಚರ್ಮರೋಗ ಮತ್ತು ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ.

  • ಆರೋಗ್ಯ ಸಮಸ್ಯೆ: ಜಿಲ್ಲೆಯಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ವೈರಲ್ ಜ್ವರದ ಲಕ್ಷಣಗಳು ಡೆಂಗ್ಯೂವಿನಂತೆಯೇ ಇರುವುದರಿಂದ ರೋಗ ಪತ್ತೆಹಚ್ಚುವಲ್ಲಿ ಸವಾಲು ಎದುರಾಗಿದೆ. ಮಕ್ಕಳು ಮತ್ತು ವೃದ್ಧರು ಹೆಚ್ಚು ಬಾಧಿತರಾಗುತ್ತಿದ್ದಾರೆ.
  • ಸೊಳ್ಳೆಗಳ ಹಾವಳಿ: ಮನೆ ಸುತ್ತಮುತ್ತ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಇದು ಡೆಂಗ್ಯೂ ಹರಡುವಿಕೆಗೆ ಪ್ರಮುಖ ಕಾರಣವಾಗಿದೆ.
  • ಮುನ್ನೆಚ್ಚರಿಕೆ ಕ್ರಮ: ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
  • ನೀರಿನ ಗುಣಮಟ್ಟ: ಮಕ್ಕಳ ಸುರಕ್ಷತೆಗಾಗಿ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಲ್ಲಿ ಬಳಸುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸುವಂತೆ ಜಿಲ್ಲಾ ಪಂಚಾಯಿತಿ ನಿರ್ದೇಶನ ನೀಡಿದೆ.ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ಪಂಚಾಯತ್‌ ರಾಜ್‌ ಇಲಾಖೆಯಿಂದ ನಿರ್ದೇಶನ ರವಾನೆಯಾಗಿದ್ದು, ನೀರಿನ ಮೂಲಗಳನ್ನು ಲ್ಯಾಬ್‌ ಪರೀಕ್ಷೆಗೆ ಒಳಪಡಿಸಿ ಗುಣಮಟ್ಟದ ನೀರನ್ನು ಮಾತ್ರ ಬಳಕೆ ಮಾಡುವಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಈ ಕ್ರಮವನ್ನು ಮತ್ತಷ್ಟು ವೇಗಗೊಳಿಸಲು ಆರೋಗ್ಯ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದೆ.

​ಒಟ್ಟಾರೆಯಾಗಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಾರ್ವಜನಿಕರ ಜಾಗೃತಿ ಮತ್ತು ಸ್ವಚ್ಛತೆ ಅತಿ ಅಗತ್ಯವಾಗಿದೆ.

ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ಹಾಗೂ ಕಾರ್ಯಕರ್ತರ ವಿಶೇಷ ಸಭೆ

ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ,
ಬಿ ಎಲ್. ಎ 2 ಹಾಗೂ ಕಾರ್ಯಕರ್ತರ ವಿಶೇಷ ಸಭೆಯು ಇಂದು ಅಸೈಗೋಳಿ ಬಂಟರ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಉಸ್ತುವಾರಿಗಳಾದ
ಶ್ರೀ ರಾಧಾಮೋಹನ್ ಅಗರ್ವಾವಾಲ್ ಗಣಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಯಿತು.


ಸಭೆ ಪ್ರಾರಂಭದ ಮೊದಲು ವಂದೇ ಮಾತರಂ ಹಾಡಿ, ದೀಪ ಬೆಳಗಿಸಿ ಅತಿಥಿ ಗಣ್ಯರಿಂದ ತಾಯಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು ಬಿಜೆಪಿ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೈತ ಬೈಲ್ ಸ್ವಾಗತಿಸಿದರು,

ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ವಕೀಲರಾದ ಮೋಹನ್ ರಾಜ್ ಕೆ ಆರ್ ಪ್ರಸ್ತಾವಿಕವಾಗಿ ಮಂಗಳೂರು ಮಂಡಲ ದ ಸಂಘಟನಾತ್ಮಕ ವಿಷಯಗಳ ಬಗ್ಗೆ ವರದಿ ಮಂಡಿಸಿದರು
ಈ ಸಭೆಯ ವೇದಿಕೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ವಿಧಾನ ಪರಿಷತ್ ಶಾಸಕರು ಕಿಶೋರ್ ಕುಮಾರ್ ಬೋಟ್ಯಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಮಂಗಳೂರು ಮಂಡಲದ ಪ್ರಭಾರಿ ಪೂಜಾ ಪೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೋಟ್ಟು, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ , ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರು
ಸುಧೀರ್ ಶೆಟ್ಟಿ ಕಣ್ಣೂರು ,ಮಂಗಳೂರು ಮಂಡಲದ ಬಿ ಎಲ್ ಎ-1 ಸಂಯೋಜಕರಾದ ಜಯ ಶ್ರೀ ಕರ್ಕೆರ, ಮಾಜಿ ಮಂತ್ರಿಗಳು ನಾಗರಾಜ ಶೆಟ್ಟಿ, ಮಂಗಳೂರು ಮಂಡಲದ ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್ ಉಚ್ಚಿಲ ರಾಜ್ಯ ಮೀನುಗಾರ ಪ್ರಕೋಷ್ಟ ಸಹ ಸಂಚಾಲಕರು ಯಶವಂತ ಅಮೀನ್ , ಜಿಲ್ಲಾ ವಕ್ತಾರ ಜೀವನ್ ತೊಕ್ಕೊಟ್ಟು, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಹೇಮಂತ್ ಶೆಟ್ಟಿ ,ಹಿರಿಯ ಮುಖಂಡರುಗಳಾದ ಸೀತಾರಾಮ ಬಂಗೇರ ಟಿ ಜಿ ರಾಜಾರಾಮ್ ಭಟ್,ಜಿಲ್ಲಾ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಬಿ ಎಲ್ ಎ 2 ಗಳು ಹೆಚ್ಚಿನ ಸಂಖ್ಯೆ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಮಂಗಳೂರು ಮಂಡಲದ ಉಪಾಧ್ಯಕ್ಷರು
ಮನೋಜ್ ಆಚಾರ್ಯ ನಿರೂಪಿಸಿದರು. ಬಿಜೆಪಿ ಮಂಗಳೂರು ಮಂಡಲದ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು ವಂದಿಸಿದರು

ಮಂಗಳೂರು: ಫಲ್ಗುಣಿ ನದಿಯಲ್ಲಿ ಮಾಲಿನ್ಯದಿಂದ ಸತ್ತ, ಅರೆ ಪ್ರಜ್ಞಾವಸ್ಥೆಯಲ್ಲಿರುವ ಮೀನುಗಳು ಪತ್ತೆ

ನಗರದ ಬೊಕ್ಕಪಟ್ಣ ಪ್ರದೇಶಗಳ ಫಲ್ಗುಣಿ ನದಿಯ ದಡದಲ್ಲಿ, ಬೆಂಗ್ರೆ, ಸುಲ್ತಾನ್ ಬತ್ತೇರಿ ಹಾಗೂ ನೀರಿನಲ್ಲಿ ಶನಿವಾರ ಸತ್ತ ಮತ್ತು ಅರೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಮೀನುಗಳು ಪತ್ತೆಯಾಗಿದ್ದು, ಕಳವಳ ಮೂಡಿಸಿದೆ.

ರಾಸಾಯನಿಕಯುಕ್ತ ಕಲುಷಿತ ನೀರಿನಿಂದ ಮೀನುಗಳು ಸಾವನ್ನಪ್ಪಿರಬಹುದು ಎಂದು ಜನರು ಶಂಕಿಸಿದ್ದಾರೆ.ಸ್ಥಳೀಯ ಮೀನುಗಾರರು ಶನಿವಾರ ಮುಂಜಾನೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಈ ಮೀನುಗಳನ್ನು ಗಮನಿಸಿದ್ದಾರೆ. ಬೆಂಗ್ರೆ ಮತ್ತು ಸುಲ್ತಾನ್ ಬತ್ತೇರಿ ನಡುವಿನ ಸೇತುವೆ ಕಾಮಗಾರಿಗಾಗಿ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಈಗ ಅದನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಈ ತಡೆಗೋಡೆಯಿಂದಾಗಿ ಮರವೂರು ಅಣೆಕಟ್ಟಿನವರೆಗೂ ನೀರು ನಿಂತುಹೋಗಿತ್ತು.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಪುನರಾರಂಭಗೊಂಡಿದೆ. ಬೇಸಿಗೆಯ ಅವಧಿಯಲ್ಲಿ, ಕೈಗಾರಿಕೆಗಳ ತ್ಯಾಜ್ಯ, ಮಳೆನೀರಿನ ಚರಂಡಿಗಳು ಮತ್ತು ಮಹಾನಗರ ಪಾಲಿಕೆಯ ಒಳಚರಂಡಿ ಸಂಸ್ಕರಣಾ ಘಟಕದ ಕಲುಷಿತ ನೀರು ಈ ಭಾಗದಲ್ಲಿ ಸಂಗ್ರಹವಾಗಿ, ನೀರು ಕಪ್ಪಾಗಿ ಮತ್ತು ತೀವ್ರವಾಗಿ ಕಲುಷಿತಗೊಂಡಿತ್ತು. ಹೊಸ ನೀರು ಬಂದಾಗ ಮೀನುಗಳು ಮೇಲ್ಮುಖವಾಗಿ ಈಜುತ್ತವೆ. ಆದರೆ, ನೀರಿನಲ್ಲಿರುವ ರಾಸಾಯನಿಕ ಕಲುಷಿತ ಅಂಶಗಳಿಂದಾಗಿ ಮೀನುಗಳಿಗೆ ಉಸಿರಾಡಲು ಕಷ್ಟವಾಗಿ, ಹಲವು ಮೀನುಗಳು ಪ್ರಜ್ಞೆ ತಪ್ಪಿ ಬಿದ್ದಿದ್ದರೆ, ಇನ್ನು ಕೆಲವು ಮೃತಪಟ್ಟಿವೆ ಎಂದು ಮೀನುಗಾರರು ತಿಳಿಸಿದ್ದಾರೆ. ಒಳಚರಂಡಿ ಮತ್ತು ಇತರ ಕಲುಷಿತ ವಸ್ತುಗಳನ್ನು ನದಿಗೆ ಬಿಡುವುದರಿಂದ ನದಿ ತೀವ್ರವಾಗಿ ಮಲಿನಗೊಂಡಿದೆ. ಸೇತುವೆ ಕಾಮಗಾರಿಯ ತಡೆಗೋಡೆಯಿಂದಾಗಿ ಕಲುಷಿತ ನೀರು ನಿಂತಿದ್ದೇ ಈ ಸ್ಥಿತಿಗೆ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಕರಿಸದ ತ್ಯಾಜ್ಯ ನೀರನ್ನು ನದಿಗೆ ಬಿಡಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 5 ನೇ ವಾರ್ಡ್ ನ ರಸ್ತೆ ಉದ್ಘಾಟನೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ 5ನೇ ವಾರ್ಡ್ ರಸ್ತೆಗೆ ವಾರ್ಡ್ ಕೌನ್ಸಿಲರ್ ಪ್ರವೀಣ್ಬಗಂಬಿಲ ರವರ ಅನುದಾನದಲ್ಲಿ ಬಹುಕಾಲದ ಬೇಡಿಕೆಯಾದ ರಸ್ತೆ ಅಗಲೀಕರಣ ಮತ್ತು ಇಂಟರ್ಲಾಕ್ ಅಳವಡಿಕೆಯಾದ ರಸ್ತೆಯ ಉದ್ಘಾಟನೆಯನ್ನು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀ ಜಗದೀಶ್ ಆಳ್ವ ಕುವೆತ್ತಬೈಲ್ ಮತ್ತು
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸತೀಶ್ ಶೆಟ್ಟಿ ರವರ ಉಪಸ್ಥಿತಿಯಲ್ಲಿ ಸ್ಥಳೀಯ ಹಿರಿಯರಾದ ಹೇಮಾವತಿ ಮತ್ತು ವಾರಿಜ ರವರು ಉದ್ಘಾಟನೆಯನ್ನು ನೆರವೇರಿಸಿದರು.

ಇದೇ ಸಂಧರ್ಭದಲ್ಲಿ ಎಲ್ಲರ ನೆಚ್ಚಿನ ಕೌನ್ಸಿಲರ್ ಪ್ರವೀಣ್ ಬಗಂಬಿಲ ರವರಿಗೆ ನಾಗರಿಕರು ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು , ಮಂಡಲ ಓಬಿಸಿ ಮೋರ್ಚಾ ಉಪಾಧ್ಯಕ್ಷರು ರೂಪಾ ಶೇಖರ್ ಕೋಟೆಕಾರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅತುಲ್ ಬಗಂಬಿಲ, ಕೊಂಡಾಣ ಶಕ್ತಿ ಕೇಂದ್ರ ಪ್ರಮುಖ್ ನಿತಿನ್ ಪೂಜಾರಿ, ಮಾಜಿ ಪಂಚಾಯತ್ ಸದಸ್ಯೆ ಜಲಜಾಕ್ಷಿ, ಬೂತ್ ಅಧ್ಯಕ್ಷರಾದ ರವಿಪ್ರಸಾದ್, ಕಾರ್ಯದರ್ಶಿ ಗಣೇಶ್ ಪೂಜಾರಿ, ಸೂರಜ್, ಪ್ರವೀಣ್ ಕೆಪಿ, ಜಾನ್ ನ್ಯೂಟನ್ ಪ್ರವೀಶ್, ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

ಮಂಗಳೂರು : ಕೊಂಕಣ ರೈಲ್ವೆ, ವಿಶೇಷ ಮಾನ್ಸೂನ್ ವೇಳಾಪಟ್ಟಿ

ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೊಂಕಣ ರೈಲ್ವೆ ನಿಗಮವು ರೈಲು ಕಾರ್ಯಾಚರಣೆಯ ಬಗ್ಗೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಸಂಚರಿಸುವ ರೈಲುಗಳಿಗೆ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 15 2026 ರಿಂದ ಅಕ್ಟೋಬರ್ 20, 2026 ರವರೆಗೆ ಜಾರಿಯಲ್ಲಿರಲಿದೆ.

ಪಶ್ಚಿಮ ಕರಾವಳಿ ಮತ್ತು ಕೊಂಕಣ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ, ಹಳಿಗಳ ಮೇಲೆ ನೀರು ನಿಲ್ಲುವುದು ಹಾಗೂ ಮರಗಳು ಉರುಳುವಂತಹ ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚು. ಇಂತಹ ಸನ್ನಿವೇಶಗಳಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಸಮಯದಲ್ಲೂ ಸಹಜವಾಗಿ ಬದಲಾವಣೆಗಳಾಗಲಿವೆ.

ಈ ವೇಳಾಪಟ್ಟಿಯು ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರ ಮೇಲೆ ಪ್ರಭಾವ ಬೀರಲಿದೆ. ಜೂನ್ 15 ರ ನಂತರ ಪ್ರಯಾಣಿಸಲು ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಅಥವಾ ಪ್ರಯಾಣ ಯೋಜಿಸುತ್ತಿರುವ ಪ್ರಯಾಣಿಕರು, ರೈಲು ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ರೈಲಿನ ನವೀಕೃತ ಸಮಯವನ್ನು ಪರಿಶೀಲಿಸಿಕೊಳ್ಳಲು ವಿನಂತಿಸಲಾಗಿದೆ.

ರೈಲಿನ ಸಮಯದ ಬಗ್ಗೆ ನಿಖರ ಮಾಹಿತಿಗಾಗಿ ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್ ಸಂಖ್ಯೆಯನ್ನು ಸಂಪರ್ಕಿಸಿ.