ವರ್ಷದಲ್ಲಿ 27 ದಿನ ತೆರೆದಿರುವ ದೇಗುಲ, ಅರಣ್ಯದ ನಡುವೆ ಪುಣ್ಯಕ್ಷೇತ್ರ

ನದಿಯ ದಡದಲ್ಲಿ, ದಟ್ಟ ಅರಣ್ಯದ ನಡುವೆ ಇರುವ ಪುಣ್ಯಕ್ಷೇತ್ರ. ವರ್ಷದಲ್ಲಿ ಕೇವಲ 27 ದಿನಗಳ ಕಾಲ ಮಾತ್ರ ದರ್ಶನ ಪಡೆಯಲು ಸಾಧ್ಯವಿರುವ ಈ ಪುಣ್ಯಕ್ಷೇತ್ರವೇ ಕೇರಳದ ಕೊಟ್ಟಿಯೂರು ಶಿವಕ್ಷೇತ್ರ. ಇದೀಗ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ತಾಣದ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ.

ಈ ಕ್ಷೇತ್ರವು ‘ಇಕ್ಕರೆ’ ಮತ್ತು ‘ಅಕ್ಕರೆ’ ಎನ್ನುವ 2 ಭಾಗಗಳನ್ನು ಹೊಂದಿದೆ. ಇಕ್ಕರೆ ಕೊಟ್ಟಿಯೂರು ಯಾವಾಗಲೂ ತೆರೆದಿರುತ್ತದೆ. ಆದರೆ ಅಕ್ಕರೆ ಕೊಟ್ಟಿಯೂರು ಹಳೆಯ ಕಾಲದ ಸಂಪ್ರದಾಯದಂತೆ ತೆಂಗಿನ ಗರಿಗಳಿಂದ ಮಾಡಿದ ಜೋಪಡಿಯಾಗಿದೆ. ವೈಶಾಖ ಮಾಸದ ಆ ನಿರ್ದಿಷ್ಟ 27 ದಿನಗಳನ್ನು ಬಿಟ್ಟು, ಉಳಿದ ದಿನಗಳಲ್ಲಿ ಪ್ರವೇಶವೇ ಇಲ್ಲ. ಅರಣ್ಯದೊಳಗೂ ಮನುಷ್ಯರ ಪ್ರವೇಶವನ್ನು ನಿಶೇಧಿಸಲಾಗುತ್ತದೆ.

ಸತಿ ದೇವಿಯ ಕಥೆ ಮತ್ತು ನಿಗೂಢ ಕಲ್ಲುಗಳು

ಪುರಾಣಗಳ ಪ್ರಕಾರ, ಸತಿ ದೇವಿ ಅಗ್ನಿಕುಂಡಕ್ಕೆ ಹಾರಿ ದೇಹತ್ಯಾಗ ಮಾಡಿದ ಸ್ಥಳವಿದು ಎನ್ನಲಾಗುತ್ತದೆ. ಇಲ್ಲಿ ಸತಿ ದೇವಿ ಕುಳಿತಿದ್ದ ಪೀಠದಂತಹ ಗುರುತು ಇಂದಿಗೂ ಇದೆ. ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿನ ನದಿಯಲ್ಲಿ ಸಿಗುವ ವಿಶಿಷ್ಟ ಕಲ್ಲುಗಳು. ಆಶ್ಚರ್ಯವೇನೆಂದರೆ, ಈ ಕಲ್ಲುಗಳನ್ನು ಉಜ್ಜಿದರೆ ಶ್ರೀಗಂಧದ ಪರಿಮಳ ಬರುತ್ತದೆ. ಭಕ್ತರು ಈ ಕಲ್ಲುಗಳನ್ನೇ ದೇವರ ರೂಪದಲ್ಲಿ ಪೂಜಿಸುತ್ತಾರೆ.

ಶ್ರೀಮಂತಿಕೆಯಲ್ಲಿ ಕೇರಳದ ಎರಡನೇ ದೇಗುಲ

ಈ ಕ್ಷೇತ್ರವು ಅಪಾರ ಚಿನ್ನ ಮತ್ತು ಬೆಲೆಬಾಳುವ ಕಲ್ಲುಗಳ ಸಂಗ್ರಹವನ್ನು ಹೊಂದಿದೆ. ಇವುಗಳ ಕಾರಣದಿಂದಲೇ ಇದು ಕೇರಳದ ಎರಡನೇ ಅತೀ ಶ್ರೀಮಂತ ದೇಗುಲ ಎಂಬ ಖ್ಯಾತಿ ಪಡೆದಿದೆ. ಇಲ್ಲಿನ ಆನೆ ಮೇಲಿನ ಮೆರವಣಿಗೆಯಂತೂ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ನಾರ್ವೆ ಚೆಸ್ ಚಾಂಪಿಯನ್ ಆದ ಪ್ರಜ್ಞಾನಂದ! – ಭಾರತಕ್ಕೆ ಸಂದ ಗೌರವ

ಓಸ್ಲೊ ಜೂ 6 : ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಐತಿಹಾಸಿಕ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ಅವರು ನಿರ್ಮಿಸಿದ್ದಾರೆ. ಕೇವಲ 20ನೇ ವಯಸ್ಸಿನಲ್ಲಿ ಅವರು ವಿಶ್ವ ಚೆಸ್ ವೇದಿಕೆಯಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಆರ್. ಪ್ರಜ್ಞಾನಂದ ಅವರು ಟೂರ್ನಿಯ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಎದುರಾದ ಸತತ ಎರಡು ಸೋಲುಗಳು ಅವರನ್ನು ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ತಳ್ಳಿದ್ದವು. ಆದರೆ, ಅಲ್ಲಿಗೆ ಧೃತಿಗೆಡದ ಪ್ರಜ್ಞಾನಂದ ಅವರು, ಅಸಾಧಾರಣ ಮನೋಬಲ ಮತ್ತು ತಂತ್ರಗಾರಿಕೆಯನ್ನು ಪ್ರದರ್ಶಿಸಿದರು. ಕ್ಲಾಸಿಕಲ್ ವಿಭಾಗದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ, ಹಿನ್ನಡೆಯಿಂದ ಚಾಂಪಿಯನ್ ಪಟ್ಟದವರೆಗೆ ಅವರು ಸಾಗಿದ ದಾರಿ ಚೆಸ್ ಅಭಿಮಾನಿಗಳಿಗೆ ರೋಚಕ ಅನುಭವವನ್ನು ನೀಡಿದೆ.

ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳನ್ನು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಪ್ರಜ್ಞಾನಂದ, ತಮ್ಮ ಅದಮ್ಯ ಮನೋಬಲದಿಂದ ಚೇತರಿಸಿಕೊಂಡರು. ಅಲಿರೆಝಾ ಫಿರೌಜ್ಜಾ, ಮ್ಯಾಗ್ನಸ್ ಕಾರ್ಲ್‌ಸನ್, ಡಿ. ಗುಕೇಶ್ ಮತ್ತು ವಿನ್ಸೆಂಟ್ ಕೀಮರ್ ಅವರಂತಹ ದಿಗ್ಗಜರ ವಿರುದ್ಧ ಸತತ ನಾಲ್ಕು ಕ್ಲಾಸಿಕಲ್ ಗೆಲುವುಗಳನ್ನು ಸಾಧಿಸುವ ಮೂಲಕ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಂತಿಮ ಸುತ್ತಿನಲ್ಲಿ ವೆಸ್ಲಿ ಸೋ ಅವರಿಗಿಂತ ಅರ್ಧ ಅಂಕ ಹಿಂದೆ ಇದ್ದರೂ, ಒತ್ತಡದ ನಡುವೆ ಕೀಮರ್ ವಿರುದ್ಧ ಗೆದ್ದು, ವೆಸ್ಲಿ ಸೋ ಡ್ರಾ ಸಾಧಿಸಿದ ಲಾಭದೊಂದಿಗೆ ಪ್ರಜ್ಞಾನಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಚಾಂಪಿಯನ್ ಆದರು.

ಒಂದು ಹಂತದಲ್ಲಿ ಸತತ ಎರಡು ಸೋಲುಗಳನ್ನು ಕಂಡು ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ತಲುಪಿದ್ದ ಪ್ರಜ್ಞಾನಂದ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ, ಆ ಸೋಲುಗಳೇ ಅವರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದವು. ಅಸಾಧಾರಣ ಮಾನಸಿಕ ಸ್ಥೈರ್ಯ ಮೆರೆದ ಪ್ರಜ್ಞಾನಂದ, ಟೂರ್ನಿಯ ಕ್ಲಾಸಿಕಲ್ ವಿಭಾಗದಲ್ಲಿ ಸತತ ನಾಲ್ಕು ಜಯಗಳನ್ನು ದಾಖಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಒತ್ತಡದ ನಡುವೆಯೂ ಅತ್ಯುತ್ತಮ ಆಟ ಪ್ರದರ್ಶಿಸಿದ ಪ್ರಜ್ಞಾನಂದ, ಕೀಮರ್ ಅವರನ್ನು ಮಣಿಸಿ ಮೂರು ಪೂರ್ಣ ಅಂಕಗಳನ್ನು ಗಳಿಸಿದರು. ಮತ್ತೊಂದೆಡೆ ವೆಸ್ಲಿ ಸೋ ತಮ್ಮ ಪಂದ್ಯವನ್ನು ಡ್ರಾ ಮಾಡಿಕೊಂಡ ಪರಿಣಾಮ ಪ್ರಜ್ಞಾನಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

ನಾರ್ವೆ ಚೆಸ್ 2026 ಅಂತಿಮ ಅಂಕಪಟ್ಟಿ :
1. ಆರ್. ಪ್ರಜ್ಞಾನಂದ (ಭಾರತ) – 18 ಅಂಕಗಳು
2. ವೆಸ್ಲಿ ಸೋ (ಅಮೆರಿಕ) – 17 ಅಂಕಗಳು
3. ಅಲಿರೆಝಾ ಫಿರೌಜ್ಜಾ (ಫ್ರಾನ್ಸ್) – 15.5 ಅಂಕಗಳು
4. ಮ್ಯಾಗ್ನಸ್ ಕಾರ್ಲ್‌ಸನ್ (ನಾರ್ವೆ) – 13 ಅಂಕಗಳು
5. ವಿನ್ಸೆಂಟ್ ಕೀಮರ್ (ಜರ್ಮನಿ) – 11 ಅಂಕಗಳು
6. ಡಿ. ಗುಕೇಶ್ (ಭಾರತ) – 8 ಅಂಕಗಳು

ನಾರ್ವೆ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಜ್ಞಾನಂದ ಭಾರತೀಯ ಚೆಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ವಿಶ್ವದ ಅಗ್ರಗಣ್ಯ ಆಟಗಾರರನ್ನು ಮಣಿಸಿ ಯುವ ಪ್ರಜ್ಞಾನಂದ ಸಾಧಿಸಿರುವ ಈ ಗೆಲುವು, ಭಾರತದ ಭವಿಷ್ಯದ ಪೀಳಿಗೆಗೆ ದೊಡ್ಡ ಸ್ಫೂರ್ತಿಯಾಗಿದೆ.

ಲಾಟರಿ ಖರೀದಿಸಿದ ಕೇರಳದ ವ್ಯಕ್ತಿಗೆ ವಂಚನೆ. – ಪ್ರಕರಣ ದಾಖಲು

ಕೇರಳ ಲಾಟರಿ ಬಹುಮಾನದ ಆಮಿಷವೊಡ್ಡಿ 1.85 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. 12 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಎಂದು ನಂಬಿಸಿ ಈ ವಂಚನೆ ನಡೆಸಲಾಗಿದೆ.

ಮೇ 29 ರಂದು ಫೇಸ್‌ಬುಕ್‌ನಲ್ಲಿ ಲಾಟರಿ ಜಾಹೀರಾತು ನೋಡಿ, ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದ ಸಂತ್ರಸ್ತರಿಗೆ ನವೀನ್ ಎಂಬಾತ ಲಾಟರಿ ನಂಬರ್ ಕಳುಹಿಸಿದ್ದನು. ಕೇವಲ 100 ರೂ. ಹೂಡಿಕೆ ಮಾಡಿ 12 ಲಕ್ಷ ರೂ. ಬಹುಮಾನ ಗೆದ್ದಿರುವುದಾಗಿ ನಂಬಿಸಿದ ವಂಚಕರು, ನಂತರದ ಹಂತಗಳಲ್ಲಿ ದೀಪಕ್ ಮತ್ತು ರಾಜ್‌ಕುಮಾರ್ ಹೆಸರಿನ ಗೂಗಲ್ ಪೇ ಖಾತೆಗಳಿಗೆ ತೆರಿಗೆ ಮತ್ತು ಇತರೆ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಳ್ಳುತ್ತಾ ಬಂದರು.

​ಸಂದೇಹ ಬಂದು ಕಚೇರಿಯ ವಿಳಾಸ ಕೇಳಿದಾಗ ನಕಲಿ ಮ್ಯಾಪ್ ಕಳುಹಿಸಿ ನಂಬಿಸಿದ್ದ ವಂಚಕರು, ಕೊನೆಗೆ ಜೂನ್ 2 ರಂದು ಸಂತ್ರಸ್ತರು ಖುದ್ದಾಗಿ ತಿರುವನಂತಪುರದ ಲಾಟರಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಅದು ಸಂಪೂರ್ಣ ಸುಳ್ಳು ಮತ್ತು ಫೇಕ್ ಲಾಟರಿ ಎಂಬುದು ತಿಳಿದುಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭೂಕಂಪ

ಶಿಮ್ಲಾ, ಜೂ 6 : ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ತೀವ್ರ ಭೂಕಂಪ ಸಂಭವಿಸಿದ್ದು, ಕಾಂಗ್ರಾ, ಚಂಬ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದರಿಂದಾಗಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದ ಘಟನೆಗಳು ವರದಿಯಾಗಿವೆ.

ಭೂಕಂಪದ ಆಳ ಕೇವಲ ಐದು ಕಿಲೋಮೀಟರ್ ಇರುವುದರಿಂದ ಹಲವು ಪ್ರದೇಶಗಳಲ್ಲಿ ಭೂಕಂಪನವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ರಾತ್ರಿ 10.4ರ ಸುಮಾರಿಗೆ ಕಾಂಗ್ರಾ ಚಂಬಾ ಗಡಿ ಯಲ್ಲಿ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ಧರ್ಮಶಾಲಾದಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿದೆ. ಸದ್ಯದ ವರದಿಗಳ ಪ್ರಕಾರ ಯಾವುದೇ ಜೀವ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಮಾಹಿತಿ ಲಭ್ಯವಾಗಿಲ್ಲ.

ಹಿಮಾಚಲ ಪ್ರದೇಶ ಮಾತ್ರವಲ್ಲದೆ ಚಂಡಿಗಡ ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ಈ ಭೂಕಂಪನದ ವಲಯವು ಅತ್ಯಂತ ಅಪಾಯಕಾರಿಯಾಗಿದ್ದು, ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳು ಭೂಕಂಪನ ವಲಯ 5 ರ ವ್ಯಾಪ್ತಿಗೆ ಸೇರಿವೆ.

ಭೂಕಂಪದದ ನಂತರ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ

ಹೂವಿನ ಕುಂಡಗಳಲ್ಲಿ ಹಣದ ಕಂತೆ… ಕಾಸರಗೋಡು RTO ಗೆ ವಿಜಿಲೆನ್ಸ್ ದಾಳಿ.

ಕಾಸರಗೋಡು : ಜೂ 5. ವಿಜಿಲೆನ್ಸ್ ಇಲಾಖೆಯು ಕಾಸರಗೋಡಿನ RTO ಕಚೇರಿಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದು, ಹೂವಿನ ಕುಂಡಗಳಲ್ಲಿ ಲಂಚದ ಹಣದ ಕಂತೆಗಳನ್ನು ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದೆ.

ಆರ್ ಟಿ ಓ ಕಚೇರಿಯ ಮುಂಭಾಗದಲ್ಲಿದ್ದ ಹೂವಿನ ಕುಂಡಗಳ ಅಡಿಯಲ್ಲಿ ಬಚ್ಚಿಡಲಾಗಿದ್ದ ಸುಮಾರು 17,150 ರೂ. ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಜಿಲೆನ್ಸ್ ಡಿವೈಎಸ್ಪಿ ಉನ್ನಿಕೃಷ್ಣನ್ ಈ ಕಾರ್ಯಚರಣೆಯ ನೇತೃತ್ವ ವಹಿಸಿದ್ದರು.

ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆ ಹಾಗೂ ಲಂಚ ನೀಡದೆ ಕಾಸರಗೋಡು ಆರ್ ಟಿ ಓ ಕಚೇರಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬ ದೂರುಗಳು ಬಂದಿವೆ.

ವಿವಿಧ ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳು, ಏಜೆಂಟರಿಂದ ಹಣದೊಂದಿಗೆ ಸಲ್ಲಿಸಲಾದ ಮನವಿಗಳು ಹಾಗೂ ಅರ್ಹ ನಾಗರಿಕರಿಗೆ ಸೇರಬೇಕಾದ ದಾಖಲೆಗಳನ್ನು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ಮತ್ತು ಕಾನ್ಯಂಗಾಡು ಆರ್ ಟಿ ಓ ಕಚೇರಿಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಕಚೇರಿಯ ಸಿಬ್ಬಂದಿಗಳು ಹಾಗೂ ಏಜೆಂಟರು ಸಾರ್ವಜನಿಕರಿಗೆ ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಕಾನ್ಯಂಗಾಡು ಕಚೇರಿಯಿಂದಲೂ ಹಲವಾರು ದಾಖಲೆಗಳು ಹಾಗೂ ಅರ್ಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಕೆಶಿ ಹಾಗೂ ರೆಡ್ಡಿ -ಮೆಗಾ ಸಂಧಾನ ಸಭೆ, ರಾಜೀನಾಮೆಯ ಬಗ್ಗೆ ಇಲ್ಲದ ಪ್ರತಿಕ್ರಿಯೆ…

ಖಾತೆ ಹಂಚಿಕೆಯ ಅಸಮಾಧಾನದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರೆಡ್ಡಿ ನಡುವೆ ನಡೆದ ತಡರಾತ್ರಿಯ ಸುದೀರ್ಘ ಸಂಧಾನ ಸಭೆಯು ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಶುಕ್ರವಾರ ರಾತ್ರಿ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಅವರ ನಡುವಿನ ಸುಮಾರು ಎರಡೂವರೆ ಗಂಟೆಗಳ ಸುದೀರ್ಘ ಸಭೆ, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ರಾತ್ರಿ 11 ಗಂಟೆಗೆ ಆರಂಭವಾಗಿ ಮುಂಜಾನೆ 1.30ರವರೆಗೆ ನಡೆದ ಈ ಸಭೆ, ಹೈಕಮಾಂಡ್ ಸೂಚನೆಯ ಮೇರೆಗೆ ನಡೆದ ಸಂಧಾನ ಎನ್ನಲಾಗುತ್ತಿದೆ.

ಏನಿದು ವಿವಾದ?
ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಬೇಕೆಂಬ ಬೇಡಿಕೆಯನ್ನು ರಾಮಲಿಂಗಾ ರೆಡ್ಡಿ ಪ್ರಬಲವಾಗಿ ಮುಂದಿಟ್ಟಿದ್ದರು. ಈ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದಿದ್ದ ಅವರು, ಈ ಹಿಂದೆ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ತಮಗೆ ನೀಡಿದ್ದ ಭರವಸೆಯನ್ನು ಬಹಿರಂಗವಾಗಿ ನೆನಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್, ಖಾತೆ ಬದಲಾವಣೆಯ ಅಧಿಕಾರ ಹೈಕಮಾಂಡ್‌ಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದ್ದರು.

​ಸಂಧಾನದ ನಂತರದ ಪ್ರತಿಕ್ರಿಯೆ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, “ನಾವೆಲ್ಲರೂ ಹಳೆಯ ಸ್ನೇಹಿತರು, ಎಲ್ಲವನ್ನೂ ಕುಳಿತು ಚರ್ಚಿಸಿ ಬಗೆಹರಿಸಿಕೊಂಡಿದ್ದೇವೆ. ಯಾವುದೇ ಆತಂಕ ಬೇಡ,” ಎಂದು ತಿಳಿಸಿದರು. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿರುವ ಕುರಿತಾದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿದರು. ಸಚಿವ ರಾಮಲಿಂಗಾ ರೆಡ್ಡಿ ಕೂಡ “ಸಿಎಂ ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ, ಎಲ್ಲ ಗೊಂದಲಗಳು ನಿವಾರಣೆಯಾಗಿವೆ,” ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡದೆ ತೆರಳಿದರು.

ಹೆಚ್ಚಿದ ಆತಂಕ
ಈ ಬೆಳವಣಿಗೆಯ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಪಕ್ಷದೊಳಗೆ ಇನ್ನೂ ಮೂವರು ನಾಯಕರು ಅಸಮಾಧಾನಿತರಾಗಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಮತ್ತೊಂದೆಡೆ ಹಿರಿಯ ಸಚಿವ ಎಚ್.ಕೆ. ಪಾಟೀಲ್, ಈ ವಿದ್ಯಮಾನವನ್ನು ಸರ್ಕಾರದ ಪಾಲಿನ ‘ಎಚ್ಚರಿಕೆಯ ಗಂಟೆ’ ಎಂದು ಕರೆದಿದ್ದಾರೆ.
​ಸಂಧಾನ ಯಶಸ್ವಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ಸಚಿವ ರಾಮಲಿಂಗಾ ರೆಡ್ಡಿ ಅಧಿಕೃತವಾಗಿ ರಾಜೀನಾಮೆ ವಾಪಸ್ ಪಡೆಯುವರೇ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಸದ್ಯದ ಚರ್ಚೆಯ ವಿಷಯವಾಗಿದೆ.

ಮಂಗಳೂರು : ಕೊಂಕಣ ರೈಲ್ವೆ, ವಿಶೇಷ ಮಾನ್ಸೂನ್ ವೇಳಾಪಟ್ಟಿ

ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೊಂಕಣ ರೈಲ್ವೆ ನಿಗಮವು ರೈಲು ಕಾರ್ಯಾಚರಣೆಯ ಬಗ್ಗೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಸಂಚರಿಸುವ ರೈಲುಗಳಿಗೆ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 15 2026 ರಿಂದ ಅಕ್ಟೋಬರ್ 20, 2026 ರವರೆಗೆ ಜಾರಿಯಲ್ಲಿರಲಿದೆ.

ಪಶ್ಚಿಮ ಕರಾವಳಿ ಮತ್ತು ಕೊಂಕಣ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ, ಹಳಿಗಳ ಮೇಲೆ ನೀರು ನಿಲ್ಲುವುದು ಹಾಗೂ ಮರಗಳು ಉರುಳುವಂತಹ ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚು. ಇಂತಹ ಸನ್ನಿವೇಶಗಳಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಸಮಯದಲ್ಲೂ ಸಹಜವಾಗಿ ಬದಲಾವಣೆಗಳಾಗಲಿವೆ.

ಈ ವೇಳಾಪಟ್ಟಿಯು ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರ ಮೇಲೆ ಪ್ರಭಾವ ಬೀರಲಿದೆ. ಜೂನ್ 15 ರ ನಂತರ ಪ್ರಯಾಣಿಸಲು ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಅಥವಾ ಪ್ರಯಾಣ ಯೋಜಿಸುತ್ತಿರುವ ಪ್ರಯಾಣಿಕರು, ರೈಲು ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ರೈಲಿನ ನವೀಕೃತ ಸಮಯವನ್ನು ಪರಿಶೀಲಿಸಿಕೊಳ್ಳಲು ವಿನಂತಿಸಲಾಗಿದೆ.

ರೈಲಿನ ಸಮಯದ ಬಗ್ಗೆ ನಿಖರ ಮಾಹಿತಿಗಾಗಿ ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್ ಸಂಖ್ಯೆಯನ್ನು ಸಂಪರ್ಕಿಸಿ.

ನಿವೃತ್ತ ಐಎಎಸ್ ಅಧಿಕಾರಿ ಎಲ್. ಕೆ. ಅತೀಕ್ ಅವರು ಸಿ. ಎಂ, ಡಿ. ಕೆ. ಶಿವಕುಮಾರ್ ಅವರ ಆರ್ಥಿಕ ಸಲಹೆಗಾರರಾಗಿ ನೇಮಕ.

ಬೆಂಗಳೂರು, ಜೂನ್ 4 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರ್ಥಿಕ ಸಲಹೆಗಾರರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಎಲ್. ಕೆ ಅತೀಕ್ ಅವರನ್ನು ನೇಮಕ ಮಾಡಲಾಗಿದೆ.

​ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಅಧಿಕೃತ ಅಧಿಸೂಚನೆಯೊಂದನ್ನು ಹೊರಡಿಸಿದ್ದು, ಈ ಹೊಸ ಹುದ್ದೆಗೆ ಮುಖ್ಯ ಕಾರ್ಯದರ್ಶಿಗೆ ಸಮಾನವಾದ ವೇತನ ಮತ್ತು ಸೌಲಭ್ಯಗಳನ್ನು ನಿಗದಿಪಡಿಸಿದೆ. ಪ್ರಸ್ತುತ ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ 1991 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅತೀಕ್ ಅವರು, ಈ ಹೊಸ ಜವಾಬ್ದಾರಿಯನ್ನು ತಮ್ಮ ಪ್ರಸ್ತುತ ಹುದ್ದೆಯೊಂದಿಗೆ ಏಕಕಾಲದಲ್ಲಿ ನಿರ್ವಹಿಸಲಿದ್ದಾರೆ.

ಅತೀಕ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಉನ್ನತ ಹುದ್ದೆಗಳಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ (PMO) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ವಾಷಿಂಗ್ಟನ್ ಡಿಸಿಯ ವಿಶ್ವ ಬ್ಯಾಂಕ್ ಗುಂಪಿನ ಮಂಡಳಿಯಲ್ಲಿ ಭಾರತದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಆಡಳಿತ ಸುಧಾರಣಾ ಕ್ಷೇತ್ರಗಳಲ್ಲಿ ನಾಯಕತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ, ಶಿಕ್ಷಣ, ಆರೋಗ್ಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ಅನೇಕ ಪ್ರಮುಖ ರಾಷ್ಟ್ರೀಯ ಉಪಕ್ರಮಗಳನ್ನು ರೂಪಿಸುವಲ್ಲಿ ಇವರ ಪಾತ್ರ ಹಿರಿದು.

ವಿವಿಧ ಸರ್ಕಾರಿ ನಿಗಮಗಳ ಮಂಡಳಿಯಲ್ಲಿ ಸದಸ್ಯರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.

ಬೆಳ್ತಂಗಡಿ : ಅಪರಿಚಿತ ವ್ಯಕ್ತಿ ಹತ್ಯೆ, ಮೂವರ ಬಂಧನ

ಬೆಳ್ತಂಗಡಿ : ಬೆಳ್ತಂಗಡಿ ಸಮೀಪದ ಗುರುವಾಯನಕೆರೆ ಬಳಿಯ ಅಲಾದಿಕೊಟ್ಟಿಗೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮೃತರ ಸಹೋದರ ನಿತಿನ್ (34) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ವಾಟ್ಸಾಪ್ ಮೂಲಕ ಮೃತದೇಹದ ಭಾವಚಿತ್ರವೊಂದು ಲಭ್ಯವಾಗಿದ್ದು, ಅದನ್ನು ನೋಡಿದ ಕೂಡಲೇ ನಿತಿನ್ ಅವರು ತಮ್ಮ ಸಹೋದರ ಯತೀಶ್ ಎಂದು ಗುರುತಿಸಿದ್ದಾರೆ.
​ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಜೂನ್ 1 ರ ಬೆಳಗಿನ ಜಾವ ಯತೀಶ್ ಅವರ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಈ ಕೃತ್ಯದಲ್ಲಿ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿಯ ಇಬ್ರಾಹಿಂ (54) ಭಾಗಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳ ಹಲ್ಲೆಯಿಂದಲೇ ಯತೀಶ್ ಮೃತಪಟ್ಟಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
​ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2026 ರ ಅಡಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 103 ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೆ. ಸುರೇಂದ್ರನ್ ಅವರ ಪರಿಶ್ರಮದ ಫಲ!!!

ಕೆ. ಸುರೇಂದ್ರನ್ ಅವರ ಪರಿಶ್ರಮದ ಫಲವಾಗಿ ಕಾಸರಗೋಡು ಸಂಸದರು ಮತ್ತು ಮಂಜೇಶ್ವರ ಶಾಸಕರು ದೀರ್ಘಕಾಲದಿಂದ ತಿರಸ್ಕರಿಸಿದ ಎನ್ಮಕಜೆ ಗ್ರಾಮ ಪಂಚಾಯತ್ ನ ವಾರ್ಡ್ 18 ನಾಲ್ಕ ವ್ಯಾಪ್ತಿಯ ಪಾಪಿತಡ್ಕ – ನೀರಾಮೂಳೆ – ಗುರಿನೆರೋಲು ರಸ್ತೆ ( THARING + CONCRETING ) ನಿರ್ಮಾಣಕ್ಕೆ Rs.30 ಲಕ್ಷ ಮಂಜೂರು ಮಾಡಿರುವ ಡಾ. ಪಿ.ಟಿ ಉಷಾ ಎಂಪಿ ಅವರಿಗೆ ಧನ್ಯವಾದಗಳು.