ಮಂಗಳೂರು : ಕೊಂಕಣ ರೈಲ್ವೆ, ವಿಶೇಷ ಮಾನ್ಸೂನ್ ವೇಳಾಪಟ್ಟಿ

ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೊಂಕಣ ರೈಲ್ವೆ ನಿಗಮವು ರೈಲು ಕಾರ್ಯಾಚರಣೆಯ ಬಗ್ಗೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಸಂಚರಿಸುವ ರೈಲುಗಳಿಗೆ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 15 2026 ರಿಂದ ಅಕ್ಟೋಬರ್ 20, 2026 ರವರೆಗೆ ಜಾರಿಯಲ್ಲಿರಲಿದೆ.

ಪಶ್ಚಿಮ ಕರಾವಳಿ ಮತ್ತು ಕೊಂಕಣ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ, ಹಳಿಗಳ ಮೇಲೆ ನೀರು ನಿಲ್ಲುವುದು ಹಾಗೂ ಮರಗಳು ಉರುಳುವಂತಹ ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚು. ಇಂತಹ ಸನ್ನಿವೇಶಗಳಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಸಮಯದಲ್ಲೂ ಸಹಜವಾಗಿ ಬದಲಾವಣೆಗಳಾಗಲಿವೆ.

ಈ ವೇಳಾಪಟ್ಟಿಯು ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ನಡುವೆ ಸಂಚರಿಸುವ ಸಾವಿರಾರು ಪ್ರಯಾಣಿಕರ ಮೇಲೆ ಪ್ರಭಾವ ಬೀರಲಿದೆ. ಜೂನ್ 15 ರ ನಂತರ ಪ್ರಯಾಣಿಸಲು ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಅಥವಾ ಪ್ರಯಾಣ ಯೋಜಿಸುತ್ತಿರುವ ಪ್ರಯಾಣಿಕರು, ರೈಲು ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ರೈಲಿನ ನವೀಕೃತ ಸಮಯವನ್ನು ಪರಿಶೀಲಿಸಿಕೊಳ್ಳಲು ವಿನಂತಿಸಲಾಗಿದೆ.

ರೈಲಿನ ಸಮಯದ ಬಗ್ಗೆ ನಿಖರ ಮಾಹಿತಿಗಾಗಿ ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ ಹೆಲ್ಪ್‌ಲೈನ್ ಸಂಖ್ಯೆಯನ್ನು ಸಂಪರ್ಕಿಸಿ.