ಭಟ್ಕಳದಲ್ಲಿ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಆರೋಪ : ಹಿಂದೂ ಸಂಘಟನೆಯ ಮುಖಂಡರ ವಿರುದ್ಧ ದೂರು
ಭಟ್ಕಳದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಹಿಂದೂ ಸಂಘಟನೆಯ ಮುಖಂಡ ಗೋವಿಂದ ನಾಯ್ಕ್ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆಯು ಸಾಗರ ರಸ್ತೆಯ ಕಸ ವಿಲೇವಾರಿ ಘಟಕದ ಬಳಿ ನಡೆದ ಘಟನೆಯನ್ನು ವಿರೋಧಿಸಿ, ಕಾರ್ಯಕರ್ತರು ಭಟ್ಕಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಹಿಂದೂ ಕಾರ್ಯಕರ್ತರಾದ ಶ್ರೀಕಾಂತ ನಾಯ್ಕ್ ಮತ್ತು ಕುಮಾರ್ ನಾಯ್ಕ್ ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನಡೆದಿದೆ.
ಈ ಪ್ರತಿಭಟನೆಯಲ್ಲಿ ಗೋವಿಂದ ನಾಯ್ಕ್ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದರಿಂದ, ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ. . ಭಟ್ಕಳ ಗ್ರಾಮೀಣ ಠಾಣೆಯ ಪಿಐ ವೆಂಕಟೇಶ್ ಮುರನಾಳ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.



