ಕೊಡಗಿನಲ್ಲಿ ತಾಯಿ-ಮಗು ಮತಾಂತರ : ಲವ್ ಜಿಹಾದ್ ಹಾಗೂ ಮತಾಂತರದ ದೊಡ್ಡ ಸಂಚು

ಕೊಡಗಿನ ಕುಶಾಲನಗರದಿಂದ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸಚಿತಾ ಮತ್ತು ಅವರ 9 ವರ್ಷದ ಮಗು ಕೇರಳದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ ಪತ್ತೆಯಾಗಿದ್ದಾರೆ. ಸಚಿತಾ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕ ಸಲೀಂ ಎಂಬಾತನ ಪ್ರಭಾವದಿಂದ ಈಕೆ ಮಗುವಿನೊಂದಿಗೆ ಕೇರಳಕ್ಕೆ ಹೋಗಿದ್ದು, ಅಲ್ಲಿ ಧರ್ಮ ಬದಲಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಮಗುವಿಗೂ ಮತಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಪ್ರಕರಣದ ಹಿಂದೆ ಮತಾಂತರ ಮತ್ತು ‘ಲವ್ ಜಿಹಾದ್’ ಸಂಚು ಇರುವುದಾಗಿ ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಪತ್ನಿ ಹಾಗೂ ಮಗು ಕಾಣೆಯಾಗಿದ್ದ ಬಳಿಕ ಮಹಿಳೆಯ ಪತಿ ಸಾಕಷ್ಟು ಹುಡುಕಾಟ ನಡೆಸಿದ್ದರು. ನಂತರ ಪತ್ನಿ ಕೆಲಸ ಮಾಡುತ್ತಿದ್ದ ಅಂಗಡಿ ಮೇಲೆ ಅನುಮಾನ ವ್ಯಕ್ತಪಡಿಸಿ, ಹಿಂದೂಪರ ಸಂಘಟನೆಗಳ ಸಹಕಾರದೊಂದಿಗೆ ಕುಶಾಲನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲೀಂ ಮತ್ತು ಜಲೀಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಸಮಗ್ರ ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನೀಟ್ ಯುಜಿ ಮರುಪರೀಕ್ಷೆ

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

  • ಅಣುಕು ಕಾರ್ಯಾಚರಣೆ (Mock Drill): ಇಂದು ದೇಶಾದ್ಯಂತ 551 ನಗರಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಗಳಾದ ಪ್ರಶ್ನೆಪತ್ರಿಕೆ ವಿತರಣೆ, ಸಂಗ್ರಹ ಮತ್ತು ಸಾಗಣೆಯ ಅಣುಕು ಕಾರ್ಯಾಚರಣೆ ನಡೆಯುತ್ತಿದೆ.
  • ತ್ರಿ-ಹಂತದ ಭದ್ರತೆ: ನಾಳೆ ನಡೆಯುವ ಪರೀಕ್ಷೆಗಾಗಿ ದೇಶದ 5,500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜಿಲ್ಲಾಡಳಿತ, ರಾಜ್ಯ ಪೊಲೀಸ್ ಪಡೆ ಮತ್ತು ಕೇಂದ್ರದ ವಿಶೇಷ ತಂಡಗಳಿಂದ ಮೂರು ಹಂತದ ಬಿಗಿ ಭದ್ರತೆ ಕಲ್ಪಿಸಲಾಗಿದೆ.
  • ಭದ್ರತಾ ಸಿಬ್ಬಂದಿ: ಸುಮಾರು 2.5 ಲಕ್ಷ ಪೊಲೀಸರು ಮತ್ತು 15,000 ಅರೆಸೇನಾ ಸಿಬ್ಬಂದಿಯನ್ನು ಭದ್ರತೆ ಹಾಗೂ ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗೆ ನಿಯೋಜಿಸಲಾಗಿದೆ.
  • ತಾಂತ್ರಿಕ ನಿಗಾ: ಪರೀಕ್ಷಾ ಕೇಂದ್ರಗಳಲ್ಲಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಮತ್ತು 15,000 ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಲಾಗಿದ್ದು, ಎನ್‌ಟಿಎ ಕಚೇರಿಯಿಂದ ನೈಜ ಸಮಯದ (Real-time) ಮೇಲ್ವಿಚಾರಣೆ ನಡೆಸಲಾಗುತ್ತದೆ.