ಪಕ್ಷದ ಶುದ್ಧೀಕರಣ ವಿಚಾರ… ಹೇಳಿಕೆ ತಿರುಚಲಾಗಿದೆ – ಡಿ. ವಿ. ಸದಾನಂದ ಗೌಡ

ಪಕ್ಷ ಶುದ್ಧೀಕರಣ ವಿಚಾರದಲ್ಲಿ ಪುತ್ತೂರು ನನ್ನ ಲೆವೆಲ್ನದ್ದಲ್ಲ ಎಂದು ಮಾಧ್ಯಮದ ಮುಂದೆ ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ. ಹಾಗೂ ಈ ಹೇಳಿಕೆಯನ್ನು ಅಪಾರ್ಥವಾಗುವ ರೀತಿಯಲ್ಲಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಚಾರಿತ್ರಿಯ ವಧೆ ಮಾಡುತ್ತಿರುವುದು ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

ಅದು ನನ್ನ ಮಟ್ಟದಲ್ಲಿ ನಿರ್ಧಾರವಾಗುವ ವಿಷಯವಲ್ಲ. ಈ ವಿಷಯದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಕ್ಷದ ಹಿರಿಯ ನಾಯಕರಿಗೆ ಸೇರಿದ್ದು, ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂಬುದಾಗಿತ್ತು ಎಂದು ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ, ಪುತ್ತೂರು ಹಾಗೂ ಪಕ್ಷದ ಬಗ್ಗೆ ನಿರ್ಲಕ್ಷ ಧೋರಣೆ ಹೊಂದಿರುವಂತೆ ತೋರಿಸಲಾಗುತ್ತಿದೆ ಎಂದು ಹೇಳಿದರು.

ಪಕ್ಷದ ನಾಯಕತ್ವ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ತಾನು ಬದ್ಧನಾಗಿದ್ದು ಪಕ್ಷದ ಹಿತಾಸಕ್ತಿಯೇ ತನ್ನ ಆದ್ಯತೆಯಾಗಿದೆ. ಪುತ್ತೂರು ಮತ್ತು ಪಕ್ಷದ ಬಗ್ಗೆ ತಮಗೆ ಅಪಾರ ಗೌರವವಿದ್ದು ರಾಜಕೀಯ ಜೀವನದಲ್ಲಿ ದೊರೆತ ಅವಕಾಶಗಳು ಹಾಗೂ ಬೆಂಬಲವನ್ನು ಸದಾ ಸ್ಮರಿಸುತ್ತೇನೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸದೆ ಅದರ ನಿಜವಾದ ಆಶಯವನ್ನು ಗಮನಿಸುವಂತೆ ಅವರು ಮನವಿ ಮಾಡಿದ್ದಾರೆ.