ವೈದ್ಯಕೀಯ ಕೋರ್ಸ್ ಗಳಿಗೆ ಇಲ್ಲ ಶುಲ್ಕ ಹೆಚ್ಚಳ : ಸರ್ಕಾರದ ಮಹತ್ವದ ನಿರ್ಧಾರ
ಸರಕಾರದಿಂದ ವೈದ್ಯಕೀಯ ಕೋರ್ಸ್ ಗಳಿಗೆ ಶುಲ್ಕ ಹೆಚ್ಚಳ ಇಲ್ಲ ಎಂಬ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ನಿಜಕ್ಕೂ ಸಮಾಧಾನಕರವಾದ ಮತ್ತು ಸಂತೋಷದ ಸುದ್ದಿ ಕೇಳಿದಂತಾಗಿದೆ.


ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ (Undergraduate) ಮತ್ತು ಸ್ನಾತಕೋತ್ತರ (Postgraduate) ಕೋರ್ಸ್ಗಳ ಶುಲ್ಕದಲ್ಲಿ ಯಾವುದೇ ರೀತಿಯ ಏರಿಕೆ ಇರುವುದಿಲ್ಲ. 2025-26ನೇ ಸಾಲಿನಲ್ಲಿ ಅನ್ವಯವಾಗುತ್ತಿದ್ದ ಶುಲ್ಕ ರಚನೆಯನ್ನೇ ಈ ವರ್ಷವೂ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ನೀಟ್ (NEET) ಪರೀಕ್ಷೆಯ ಗೊಂದಲ ಮತ್ತು ಮರುಪರೀಕ್ಷೆಯ ಆತಂಕದಿಂದ ಈಗಾಗಲೇ ವಿದ್ಯಾರ್ಥಿಗಳು ಒತ್ತಡದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕ ಏರಿಕೆ ಮಾಡುವುದು ಸೂಕ್ತವಲ್ಲ ಎಂಬ ಮಾನವೀಯ ದೃಷ್ಟಿಕೋನದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ, ಪೋಷಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದ್ದಾರೆ.
ಈ ನಿರ್ಧಾರವು ಆರ್ಥಿಕವಾಗಿ ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕನಸನ್ನು ನನಸಾಗಿಸಿಕೊಳ್ಳಲು ದೊಡ್ಡ ಮಟ್ಟದ ನೆರವಾಗಲಿದೆ.
