ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ – ಭಾರತದ ಸೇನಾ ಮುಖ್ಯಸ್ಥರಾಗಿ ಆಯ್ಕೆ

ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವರು ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಾಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ನಿವೃತ್ತಿಯ ನಂತರ, ಜೂನ್ 30 ರಂದು ಧೀರಜ್ ಸೇಠ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು 2028 ರ ಆಗಸ್ಟ್ 31 ರವರೆಗೆ ಈ ಹುದ್ದೆಯಲ್ಲಿ ಇರಲಿದ್ದಾರೆ.

ಇವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, 1986 ರ ಡಿಸೆಂಬರ್‌ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಇವರು 40 ವರ್ಷಗಳ ಸೇನಾ ಸೇವೆಯ ಅನುಭವ ಹೊಂದಿದ್ದಾರೆ.

1997 ರಲ್ಲಿ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ, ಆರ್ಮರ್ಡ್ ಕಾರ್ಪ್ಸ್ (ಸೈನಿಕ ವಿಭಾಗ) ನಿಂದ ಸೇನಾ ಮುಖ್ಯಸ್ಥರಾದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಧೀರಜ್ ಸೇಠ್ ಪಾತ್ರರಾಗಿದ್ದಾರೆ.

ಇವರು ಮರುಭೂಮಿ ವಲಯ, ಜಮ್ಮು ಮತ್ತು ಕಾಶ್ಮೀರ, 21ನೇ ಸ್ಟ್ರೈಕ್ ಕಾರ್ಪ್ಸ್, ದೆಹಲಿ ಪ್ರದೇಶದ ಕಮಾಂಡಿಂಗ್ ಆಫೀಸರ್, ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಸದರ್ನ್ ಕಮಾಂಡ್‌ನಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಮತ್ತು ಸೇನಾ ಪ್ರಧಾನ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.