ದ್ವಿಚಕ್ರ ವಾಹನ ಸವಾರಿಯಲ್ಲಿ ಮಕ್ಕಳಿಗೆ ಹೆಲ್ಮೆಟ್ ಇರಲೇಬೇಕು : ಪೊಲೀಸರಿಂದ ಜಾಗೃತಿ ಅಭಿಯಾನ

ಮಂಗಳೂರು, ಜೂನ್ 16: ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗೆ ರಕ್ಷಣೆಯನ್ನು ಒದಗಿಸುವ ನಿಟ್ಟಿನಲ್ಲಿ, ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಂಗಳೂರು ನಗರ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶಾಲೆಗಳು ಪುನರಾರಂಭಗೊಂಡಿರುವ ಹಿನ್ನೆಲೆಯಲ್ಲಿ, ಈ ನಿಯಮದ ಕುರಿತು ಪೋಷಕರಲ್ಲಿ ಅರಿವು ಮೂಡಿಸುವ ಜಾಗೃತಿ ಅಭಿಯಾನವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಬೆಳಗಿನ ಸಮಯದಲ್ಲಿ ಶಾಲೆಗಳ ಬಳಿ ಭೇಟಿ ನೀಡುತ್ತಿರುವ ಪೊಲೀಸರು, ಪೋಷಕರಿಗೆ ನ್ಯಾಯಾಲಯದ ನಿರ್ದೇಶನಗಳ ಬಗ್ಗೆ ನೆನಪಿಸುತ್ತಿದ್ದಾರೆ. ಅನೇಕ ಪೋಷಕರು ಸ್ವತಃ ಹೆಲ್ಮೆಟ್ ಧರಿಸಿದರೂ, ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಅಜಾಗರೂಕತೆ ವಹಿಸುವುದು ಕಂಡುಬರುತ್ತಿದೆ. “ಶಾಲೆ ಹತ್ತಿರವಿದೆ” ಅಥವಾ “ಸ್ವಲ್ಪ ದೂರದ ಪ್ರಯಾಣ” ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸದಿರುವುದು ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಣ್ಣ ಅಪಘಾತಗಳಲ್ಲೂ ವಾಹನದ ಸಮತೋಲನ ತಪ್ಪಿ ಮಕ್ಕಳು ತಲೆಗೆ ಗಂಭೀರ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಈ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.

​ಹೆಲ್ಮೆಟ್ ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವಲ್ಲ, ಬದಲಾಗಿ ಮಕ್ಕಳ ಜೀವ ರಕ್ಷಣೆಗಾಗಿ ಎಂಬುವುದನ್ನು ಪೋಷಕರು ಅರಿತುಕೊಳ್ಳಬೇಕು. ಇದಲ್ಲದೆ, ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್ ಜೊತೆಗೆ, ಸವಾರ ಅಥವಾ ಹಿಂಬದಿ ಸವಾರರಿಗೆ ಮಗುವನ್ನು ಸುರಕ್ಷಿತವಾಗಿ ಬಂಧಿಸಲು ‘ಸೆಫ್ಟಿ ಬೆಲ್ಟ್’ಗಳನ್ನು ಬಳಸುವುದು ಕಡ್ಡಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

​ಹಿಂದೆ ನಡೆಸಿದ ಅಭಿಯಾನಗಳ ಹೊರತಾಗಿಯೂ, ಇನ್ನೂ ಅನೇಕರು ಈ ನಿಯಮವನ್ನು ನಿರ್ಲಕ್ಷಿಸುತ್ತಿದ್ದಾರೆ. ವಿಶೇಷವಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಸುಮಾರು 80 ಪ್ರತಿಶತದಷ್ಟು ಮಕ್ಕಳು ಹೆಲ್ಮೆಟ್ ಧರಿಸುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಈ ನಿಯಮ ಪಾಲನೆಯ ಕೊರತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

​ಮಗುವಿನ ತಲೆಗೆ ಸರಿಯಾಗಿ ಹೊಂದಿಕೊಳ್ಳುವ ಅಳತೆಯ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ 500 ರಿಂದ 1,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು, ಅಲ್ಲದೆ ಚಾಲನಾ ಪರವಾನಗಿಯನ್ನು ಅಮಾನತು ಮಾಡುವ ಅಧಿಕಾರವೂ ಅಧಿಕಾರಿಗಳಿಗೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ಸಂಚಾರ ಶಿಸ್ತನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದು ಅವರು ಮನವಿ ಮಾಡಿದ್ದಾರೆ.