ಎಸ್ಐಟಿ ಅಧಿಕಾರಿಗಳ ಕಾರು ಪಲ್ಟಿ : ನಾಲ್ವರು ಅಧಿಕಾರಿಗಳಿಗೆ ಗಾಯ

ಧರ್ಮಸ್ಥಳ ಪ್ರಕರಣದ ತನಿಖಾ ಪ್ರಗತಿಯನ್ನು ಚರ್ಚಿಸಲು, ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಿಂದ ಚಿಕ್ಕಮಗಳೂರಿನ ಎಸ್‌ಪಿ ಹಾಗೂ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿಯಾಗಲು ಅಧಿಕಾರಿಗಳ ತಂಡವೊಂದು ಇನೋವಾ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಘಾಟ್‌ನ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲೇ ಪಲ್ಟಿಯಾಗಿ ತಲೆಕೆಳಗಾಗಿದೆ.

ಈ ದುರದೃಷ್ಟಕರ ಅಪಘಾತದಲ್ಲಿ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಪೊಲೀಸ್ ಸಿಬ್ಬಂದಿ (ಪಿಸಿ) ಮಂಜುನಾಥ್ ಹಾಗೂ ಕಾರಿನ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ವಾಹನ ಸವಾರರು ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದವರನ್ನು ಹೊರಗೆ ತೆಗೆಯಲು ನೆರವಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಘಾಟ್ ರಸ್ತೆಯ ಸಂಚಾರವನ್ನು ಸುಗಮಗೊಳಿಸಿದ್ದಾರೆ.
