ಕತಾರ್ನ ರಾಸ್ ಲಾಫನ್ನಲ್ಲಿ ಭೀಕರ ಸ್ಫೋಟ: 54 ಮಂದಿಗೆ ಗಾಯ, 18 ಜನರು ನಾಪತ್ತೆ

ಕತಾರ್ನ ಅತಿ ದೊಡ್ಡ ನೈಸರ್ಗಿಕ ಅನಿಲ ರಫ್ತು ಕೇಂದ್ರವಾದ ರಾಸ್ ಲಾಫನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 54 ಜನರು ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇರಾನ್ ಯುದ್ಧದ ಕಾರಣದಿಂದ ಸ್ಥಗಿತಗೊಂಡಿದ್ದ ಅನಿಲ ರಫ್ತು ಪ್ರಕ್ರಿಯೆಯನ್ನು ಪುನರಾರಂಭಿಸಲು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಫೋಟದಿಂದಾಗಿ ಭಾರಿ ಅಗ್ನಿ ಅವಘಡ ಉಂಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಜಾಗತಿಕವಾಗಿ ಅತಿ ಹೆಚ್ಚು ನೈಸರ್ಗಿಕ ಅನಿಲ ಉತ್ಪಾದಿಸುವ ದೇಶಗಳಲ್ಲಿ ಕತಾರ್ ಪ್ರಮುಖವಾಗಿದೆ. ಅಂತಹ ಪ್ರಮುಖ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿರುವುದು ಅಂತರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಮತ್ತಷ್ಟು ಅನಿಶ್ಚಿತತೆಯನ್ನು ಮೂಡಿಸುವ ಭೀತಿ ಉಂಟುಮಾಡಿದೆ.
