ಕರ್ನಾಟಕದ 7 ಜನ ಸಾಧಕರಿಗೆ ದೊರೆತ ಪದ್ಮಶ್ರೀ ಪ್ರಶಸ್ತಿ ಹಾಗೂ ಒಬ್ಬರಿಗೆ ಪದ್ಮಭೂಷಣ ಪ್ರಶಸ್ತಿ

ಫೋಟೋ ಕೃಪೆ : The Indian Express

ರಾಷ್ಟ್ರಪತಿ ಭವನದಲ್ಲಿ ನಿನ್ನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಹಾಗೂ ಪದ್ಮಭೂಷಣ ಪ್ರಶಸ್ತಿ ಯನ್ನು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರು ನೀಡಿದರು. ಕರ್ನಾಟಕದ ಡಾ. ಪ್ರಭಾಕರ್ ಕೋರೆ, ಶಶಿ ಶೇಖರ್ ವೇಂಪತಿ ಡಾ. ಸುರೇಶ್ ಹನಗವಾಡಿ, ವಿಜ್ಞಾನಿ ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್ ಮತ್ತು ಉದ್ಯಮಿ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೂ ಶತವಧಾನಿ ಆರ್ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.

- ಡಾ. ಪ್ರಭಾಕರ ಕೋರೆ : ಕೆಎಲ್‌ಇ ಸಂಸ್ಥೆಯ ಮೂಲಕ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಆಸ್ಪತ್ರೆಗಳ ಮೂಲಕ ಬಡವರಿಗೆ ಉಚಿತ ಅಥವಾ ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ನೀಡುತ್ತಿದ್ದವರು
- ಶಶಿ ಶೇಖರ್ ವೇಂಪತಿ: ದೂರದರ್ಶನ ಮತ್ತು ಆಕಾಶವಾಣಿಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸಿದ ತಂತ್ರಜ್ಞ ಇವರು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಿ ಜಾಗತಿಕ ದಾಖಲೆ ಸೃಷ್ಟಿಸಿದ್ದಲ್ಲದೆ, ಕೋಟ್ಯಂತರ ವಿದ್ಯಾರ್ಥಿಗಳಿಗೆ ಉಚಿತವಾಗಿ ಟಿವಿ ಶಿಕ್ಷಣವನ್ನು ತಲುಪಿಸಿದ ಕೀರ್ತಿ ಇವರದ್ದು.
- ಡಾ. ಸುರೇಶ್ ಹನಗವಾಡಿ: ಸ್ವತಃ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, ಛಲ ಬಿಡದೆ ಹೋರಾಡಿದ ಕ್ರಾಂತಿಕಾರಿ ವೈದ್ಯರು ಇವರು. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆ ಲಭ್ಯವಾಗುವಂತೆ ಮಾಡುವಲ್ಲಿ ಇವರ ಪಾತ್ರ ದೊಡ್ಡದು.
- ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್: ಭಾರತೀಯ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿಸಿದ ವಿಜ್ಞಾನಿ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಅಳವಡಿಸಲಾದ ‘ದೃಷ್ಟಿ’ ವ್ಯವಸ್ಥೆಯನ್ನು ಆವಿಷ್ಕರಿಸಿದ ಹೆಗ್ಗಳಿಕೆ ಇವರದು. ಅಲ್ಲದೆ, ‘ಅಗ್ನಿ’ ಕ್ಷಿಪಣಿಯಲ್ಲಿದ್ದ ತಾಂತ್ರಿಕ ದೋಷಗಳನ್ನು ನಿವಾರಿಸುವ ಮೂಲಕ ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ.
- ಶ್ರೀ ಟಿ.ಟಿ. ಜಗನ್ನಾಥನ್: ಪ್ರೆಸ್ಟೀಜ್ ಸಂಸ್ಥೆಯನ್ನು ಬಿಲಿಯನ್ ಡಾಲರ್ ಸಾಮ್ರಾಜ್ಯವನ್ನಾಗಿ ಬೆಳೆಸಿದ ಉದಾರ ಉದ್ಯಮಿ. ಕುಕ್ಕರ್ ಸ್ಫೋಟಗೊಳ್ಳುವುದನ್ನು ತಡೆಯುವ ತಂತ್ರಜ್ಞಾನವನ್ನು ಆವಿಷ್ಕರಿಸಿದ ಇವರು, ಜನರ ಜೀವ ರಕ್ಷಣೆಯ ದೃಷ್ಟಿಯಿಂದ ಅದರ ಪೇಟೆಂಟ್ ಹಕ್ಕನ್ನು ಇಡೀ ಉದ್ಯಮಕ್ಕೆ ಉಚಿತವಾಗಿ ಬಿಟ್ಟುಕೊಟ್ಟರು. ಇವರ ಈ ನಿಸ್ವಾರ್ಥ ಸೇವೆಗಾಗಿ ಮರಣೋತ್ತರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
- ಅಂಕೇ ಗೌಡ ಎಂ : ಅವರು ಸಾಕ್ಷರತೆ ಮತ್ತು ಜ್ಞಾನದ ಸಾರ್ವಜನಿಕ ಪ್ರವೇಶಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿದ್ದ ಗೌಡ ಅವರು, ಐದು ದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿ, ಭಾರತದ ಅತಿದೊಡ್ಡ ಉಚಿತ ಗ್ರಂಥಾಲಯಗಳಲ್ಲಿ ಒಂದನ್ನು ನಿರ್ಮಿಸಿದ್ದಾರೆ.
- ಎಸ್. ಜಿ ಸುಶೀಲಮ್ಮ : ಜಿ. ಸುಶೀಲಮ್ಮನವರು ಕಳೆದ 50 ವರ್ಷಗಳಿಂದ ಸಮಾಜದ ತಳಮಟ್ಟದ, ವಂಚಿತ ಜನರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಧಾರೆ ಎರೆದಿದ್ದಾರೆ. ಇವರ ನಿಸ್ವಾರ್ಥ ಸೇವೆಯ ಫಲವಾಗಿ ಇಂದು ಹೆಣ್ಣುಮಕ್ಕಳಿಗಾಗಿ ಕನ್ನಡ ಮಾಧ್ಯಮ ಶಾಲೆ, 18 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮಾಜದ ವಿವಿಧ ವರ್ಗಗಳ ಕಲ್ಯಾಣಕ್ಕಾಗಿ ಹತ್ತು ಹಲವು ಯಶಸ್ವಿ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ.
- ಶತಾವಧಾನಿ ಡಾ. ಆರ್. ಗಣೇಶ್ : ಅವರಿಗೆ ಸಾಹಿತ್ಯಿಕ ಸೌಂದರ್ಯಶಾಸ್ತ್ರ, ಛಂದಸ್ಸು ಮತ್ತು ಅವಧಾನ ಎಂಬ ಶಾಸ್ತ್ರೀಯ ಭಾರತೀಯ ಕಲಾ ಪ್ರಕಾರದ ಸಂರಕ್ಷಣೆಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ‘ಪದ್ಮಭೂಷಣ 2026’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ 1,300ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ಮತ್ತು 5 ಶತಾವಧಾನಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
