12 ವರ್ಷಗಳ ಸುದೀರ್ಘ ಸೇವೆ, ನನ್ನ ಸೌಭಾಗ್ಯ – ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನೇತೃತ್ವದ ಎನ್ಡಿಎ (NDA) ಸರ್ಕಾರವು 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇಷ್ಟು ದೀರ್ಘಕಾಲ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ತಮ್ಮ ಸೌಭಾಗ್ಯ ಮತ್ತು ದೇವರ ಆಶೀರ್ವಾದ ಎಂದು ನಮ್ರತೆಯಿಂದ ವ್ಯಕ್ತಪಡಿಸಿದ್ದಾರೆ. ಈ ಸೇವೆ ಒಂದು “ಸಾಮೂಹಿಕ ಯಜ್ಞ” ಎಂದು ಕರೆದು, ಅದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.


ಈ 12 ವರ್ಷಗಳ ಸುದೀರ್ಘ ಆಡಳಿತವನ್ನು ಕೇವಲ ತಮ್ಮ ವೈಯಕ್ತಿಕ ಸಾಧನೆ ಎಂದು ಪರಿಗಣಿಸದೆ, ಇದು ಎನ್ಡಿಎ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮತ್ತು ದೇಶದ ಜನರ ಸಾಮೂಹಿಕ ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.2014ಕ್ಕೆ ಮುನ್ನ ದೇಶವು ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿತ್ತು ಮತ್ತು ಅದು ದೇಶಕ್ಕೆ ಹಾನಿ ಉಂಟುಮಾಡಿತ್ತು. ಆದರೆ ಈಗ ಜನರು ಸ್ಥಿರ ಸರ್ಕಾರದ ಕಾರ್ಯವೈಖರಿಯನ್ನು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇಶದ ಜನರಿಗೆ ತಮ್ಮ ಮೇಲೆ ನಂಬಿಕೆ ಇಟ್ಟು ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆ ಪ್ರಧಾನಿಯವರು ತಲೆಬಾಗಿ ನಮಿಸಿದ್ದಾರೆ. 2014 ರಲ್ಲಿ ಎನ್ ಡಿ ಎ ಸರಕಾರ ಗೆದ್ದಾಗ ಜನರಿಗೆ ಹೊಸ ಭರವಸೆ ಬಂದ ಹಾಗಾಗಿತ್ತು. ಆ ಭರವಸೆಯನ್ನು ಮುಂದೆಯೂ ಉಳಿಸಿಕೊಂಡು ದೇಶವನ್ನು ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.
ಜವಾಹರಲಾಲ್ ನೆಹರೂ ಅವರು 1952ರ ಮೇ 13ರಿಂದ 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ದಾಖಲೆಯು ಕಳೆದ 64 ವರ್ಷಗಳಿಂದ ಯಾರಿಂದಲೂ ಮುರಿಯಲ್ಪಟ್ಟಿರಲಿಲ್ಲ ಎಂಬುದು ವಿಶೇಷವಾಗಿದೆ. ಜೂನ್ 10ರಂದು ಪ್ರಧಾನಿ ಮೋದಿಯವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ನಿರಂತರ ಸೇವೆಯ ದಾಖಲೆಯನ್ನು ಮುರಿದು, 4,399 ದಿನಗಳ ಸೇವಾ ಮೈಲಿಗಲ್ಲನ್ನು ತಲುಪಿದ್ದಾರೆ.
