ಆರ್ಎಸ್ಎಸ್ ನೋಂದಣಿ ವಿಚಾರ: ದಬ್ಬಾಳಿಕೆಗೆ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ವಿಎಚ್ಪಿ, ಪ್ರಿಯಾಂಕ್ ಖರ್ಗೆಗೆ ತಿರುಗೇಟು
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ, ಆರ್ಥಿಕ ಪಾರದರ್ಶಕತೆ ಮತ್ತು ಸಾಂವಿಧಾನಿಕ ಹೊಣೆಗಾರಿಕೆಯ ಕುರಿತು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ ಪ್ರಶ್ನೆಗಳಿಗೆ ವಿಶ್ವ ಹಿಂದೂ ಪರಿಷತ್ (VHP) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆರ್ಎಸ್ಎಸ್ ಕಾನೂನುಬಾಹಿರವಾಗಿಲ್ಲ ಎಂದು ಸಮರ್ಥಿಸಿಕೊಂಡಿರುವ ವಿಎಚ್ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್, ಇಂತಹ ಆರೋಪಗಳು ಕಾಂಗ್ರೆಸ್ನ ರಾಜಕೀಯ ಪ್ರೇರಿತ ತಂತ್ರ ಎಂದು ಟೀಕಿಸಿದ್ದಾರೆ. ಸಂಘವು ಗುರು ದಕ್ಷಿಣೆಯ ಮೂಲಕವೇ ಕಾರ್ಯನಿರ್ವಹಿಸುತ್ತದೆ ಮತ್ತು ಹಿಂದಿನ ಹಲವು ನ್ಯಾಯಾಲಯದ ತೀರ್ಪುಗಳು ಆರ್ಎಸ್ಎಸ್ನ ಆರ್ಥಿಕತೆ ನ್ಯಾಯಸಮ್ಮತ ಎಂದು ಸಾಬೀತುಪಡಿಸಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.


ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ನ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ್ದು, ಸಂಘವು ಅಧಿಕೃತವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ತನ್ನ ಹಣಕಾಸಿನ ಮೂಲಗಳು, ಖರ್ಚುವೆಚ್ಚಗಳು ಮತ್ತು ಆಸ್ತಿಪಾಸ್ತಿಗಳ ಕುರಿತು ಸಾರ್ವಜನಿಕವಾಗಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಖರ್ಗೆಯವರ ಈ ಹೇಳಿಕೆಯನ್ನು “ಹಗುರವಾದ ರಾಜಕೀಯ ದಾಳಿ” ಎಂದು ಕರೆದಿರುವ ಅಲೋಕ್ ಕುಮಾರ್, ದೇಶದ ಯಾವ ಕಾನೂನು ಅಡಿಯಲ್ಲಿ ನೋಂದಣಿ ಕಡ್ಡಾಯವಾಗಿದೆ ಎಂದು ಮೊದಲು ಖರ್ಗೆ ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.
ಆರ್ಎಸ್ಎಸ್ ಹೊರಗಿನಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ, ಬದಲಾಗಿ ಸ್ವಯಂಸೇವಕರ ‘ಗುರು ದಕ್ಷಿಣೆ’ಯಿಂದಲೇ ಚಟುವಟಿಕೆಗಳನ್ನು ನಡೆಸುತ್ತದೆ. ಈ ಆದಾಯವು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆಯ ಕಾಲದಿಂದಲೂ ಕಾಂಗ್ರೆಸ್ ಆರ್ಎಸ್ಎಸ್ ಅನ್ನು ಗುರಿಯಾಗಿಸಿಕೊಂಡು ಸುಳ್ಳು ಆರೋಪಗಳನ್ನು ಮಾಡುತ್ತಾ ಬಂದಿದೆ ಎಂದು ದೂರಿದ ವಿಎಚ್ಪಿ, ಇದು ಸಂಘದ ವರ್ಚಸ್ಸನ್ನು ಹಾಳು ಮಾಡುವ ಒಂದು ಹಳೆಯ ತಂತ್ರ ಎಂದು ಕಿಡಿಕಾರಿದೆ.
ಆರ್ಎಸ್ಎಸ್ ವ್ಯವಸ್ಥಿತವಾದ ಸಂಘಟನೆಯಾಗಿದ್ದು, ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆಗಳನ್ನು ನಡೆಸುವ ಮೂಲಕ ಸ್ವಯಂಸೇವಕರ ಪಟ್ಟಿಯನ್ನು ನಿರ್ವಹಿಸುತ್ತದೆ. ಆದ್ದರಿಂದ, ಸಂಘವು ಸಂಪೂರ್ಣ ಶಿಸ್ತಿನಿಂದ ಕೆಲಸ ಮಾಡುತ್ತಿದೆ ಎಂದು ವಿಎಚ್ಪಿ ಸ್ಪಷ್ಟಪಡಿಸಿದೆ.
