ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು: ಜೂನ್ ಅಂತ್ಯಕ್ಕೆ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು ಮತ್ತು ಮಂಗಳೂರು ನಡುವಿನ ವಂದೇ ಭಾರತ್ ರೈಲು ಸಂಪರ್ಕಕ್ಕೆ ಇದ್ದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗುತ್ತಿವೆ. ಇದರಿಂದಾಗಿ ಕರಾವಳಿ ಹಾಗೂ ರಾಜ್ಯ ರಾಜಧಾನಿಗೆ ಇರುವ ಹೈಸ್ಪೀಡ್ ರೈಲು ಸಂಪರ್ಕದ ಕನಸು ನನಸಾಗಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆಯ ಸವಾಲಿನ 55 ಕಿಮೀ ಘಾಟ್ ವಿಭಾಗದಲ್ಲಿ ಜೂನ್ ಅಂತ್ಯದೊಳಗೆ ಪ್ರಾಯೋಗಿಕ ಸಂಚಾರ (Trial Run) ನಡೆಯಲಿದೆ.
ಘಾಟಿ ವಿಭಾಗದಲ್ಲಿ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀಗೆ ಸೀಮಿತಗೊಳಿಸಿರುವುದರಿಂದ, ಸುರಕ್ಷತೆಗಾಗಿ ವಂದೇ ಭಾರತ್ ರೈಲಿಗೆ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಈ ವಿಶೇಷ ರೇಕ್ ಸಿದ್ಧವಾಗಿದ್ದು, ಶೀಘ್ರವೇ ಕರ್ನಾಟಕಕ್ಕೆ ಆಗಮಿಸಲಿದೆ.


ರೈಲ್ವೆ ಸಚಿವಾಲಯದ ಆರ್‌ಡಿಎಸ್‌ಒ (RDSO) ಈ ಪರೀಕ್ಷೆಯನ್ನು ನಡೆಸಲಿದೆ. ಈ ಪರೀಕ್ಷೆ ಯಶಸ್ವಿಯಾದರೆ ಬೆಂಗಳೂರು-ಮಂಗಳೂರು ನಡುವಿನ ವೇಗದ ಮತ್ತು ಆರಾಮದಾಯಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ.
ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಈಗಾಗಲೇ ಡಿಸೆಂಬರ್ 2025ರಲ್ಲಿ ಪೂರ್ಣಗೊಂಡಿದ್ದು, ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ 5 ಟ್ರಿಪ್‌ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ. ಪ್ರಾಯೋಗಿಕ ಸಂಚಾರಗಳ ನಂತರ ಕರಾವಳಿಯ ಜನರಿಗೆ ವಂದೇ ಭಾರತ್ ರೈಲಿನ ಸೇವೆ ದೊರೆಯುವ ನಿರೀಕ್ಷೆಯಿದೆ.
ಈ ರೈಲು ಮಾರ್ಗವು ಆರಂಭವಾದರೆ ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಇನ್ನಷ್ಟು ಸುಗಮವಾಗಲಿದೆ
