ಮೈಸೂರು : ರೈಲ್ವೆ ನಿಲ್ದಾಣದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ : ಹಿಂದೂ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

ಮೈಸೂರು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಪತ್ತೇಯಾದ ಸುಮಾರು 40ಕ್ಕೂ ಹೆಚ್ಚು ಬಾಂಗ್ಲಾ ವಲಸಿಗರನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇವರು ಕೊಲ್ಕತ್ತಾದಿಂದ ಹೊರಡುವ ಹೌರಾ ಎಕ್ಸ್‌ಪ್ರೆಸ್ ರೈಲಿನ ಮೂಲಕ ಮೈಸೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ರೈಲು ನಿಲ್ದಾಣದಲ್ಲಿ ಕಾರ್ಯಕರ್ತರು ಅವರ ಗುರುತಿನ ಚೀಟಿ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ, ಕೆಲವೊಂದು ದಾಖಲೆಗಳು ನಕಲಿ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಹೆಚ್ಚಿನವರ ಬಳಿ ಪಶ್ಚಿಮ ಬಂಗಾಳದ ಗುರುತಿನ ಚೀಟಿಗಳು ಕಂಡುಬಂದಿವೆ. ವಿಚಾರಣೆ ವೇಳೆ, ತಲಾ ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ನೀಡುತ್ತಿರುವುದು ಅನುಮಾನವನ್ನು ಹೆಚ್ಚಿಸಿದೆ. ಕೆಲವರು ಕೆಲಸ ಹುಡುಕಿಕೊಂಡು ಬಂದಿದ್ದೇವೆ ಎಂದು ಹೇಳಿದರೆ, ಇನ್ನು ಕೆಲವರು ಬೇರೆಯದೇ ಕಾರಣಗಳನ್ನು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಇವರು ಮೈಸೂರಿನಿಂದ ಕೇರಳ ಮತ್ತು ಮಡಿಕೇರಿಗೆ ಹೋಗುವ ಉದ್ದೇಶ ಹೊಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ವಲಸಿಗರ ದಾಖಲೆಗಳು, ಗುರುತು ಮತ್ತು ಅವರ ಪ್ರಯಾಣದ ಉದ್ದೇಶದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.