ಧರ್ಮಸ್ಥಳ ಸಂಘದ ಸಹಾಯಕಿಯ ಚಿನ್ನದ ಸರ ಕಸಿದು ಪರಾರಿ

ಹೊಸಂಗಡಿಯ ಸರ್ವಿಸ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ದರೋಡೆಕೋರರು ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಎರಡೂವರೆ ಪವನ್ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ನಯನ ಎಂಬುವವರ ಬಳಿ, ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ದಾರಿ ಕೇಳುವ ನೆಪದಲ್ಲಿ ಸಮೀಪಿಸಿದ್ದಾರೆ. ಅವರು ಮಾತನಾಡುತ್ತಿರುವಂತೆಯೇ ಹಠಾತ್ತನೆ ದಾಳಿ ಮಾಡಿದ ದುಷ್ಕರ್ಮಿಗಳು, ನಯನ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಿ ವಾಮಂಜೂರು ಕಡೆಗೆ ವೇಗವಾಗಿ ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ತನಿಖೆ ನಡೆಸುತ್ತಿದ್ದಾರೆ.